ವೀರಾಜಪೇಟೆ, ಜು. 3: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕಾನೂನು ಜಾರಿಗೊಳಿಸುತ್ತವೆ. ವಾಹನ ಚಾಲಕರು ಕಾನೂನು ಪರಿಪಾಲನೆ ಮಾಡದೇ ಉಲ್ಲಂಘನೆ ಮಾಡುತ್ತಿರುವದು ಕಂಡು ಬಂದಿರುತ್ತದೆ. ಇಲಾಖೆಯು ನೀಡಿರುವ ಅದೇಶವನ್ನು ಪಾಲನೆ ಮಾಡಬೇಕು ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ವೀರಾಜಪೇಟೆ ವೃತ್ತ ನೀರಿಕ್ಷಕ ಕ್ಯಾತೆಗೌಡ ಹೇಳಿದ್ದಾರೆ.

ಸಂತ ಅನ್ನಮ್ಮ ಸಭಾಂಗಣದಲ್ಲಿ ಚಾಲಕ ಮತ್ತು ಮಾಲೀಕರಿಗೆ ಆರಕ್ಷಕ ಇಲಾಖೆಯಿಂದ ಏರ್ಪಡಿಸಲಾಗಿದ್ದ ಒಂದು ದಿನದ ರಸ್ತೆ ಸುರಕ್ಷತೆ ಮತ್ತು ಶಾಲಾ ಮಕ್ಕಳ ವಾಹನ ಚಾಲಕರಿಗೆ ಮಾಹಿತಿ ಕಾನೂನು ಪರಿಪಾಲನೆಗೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಹಿತಾಸಕ್ತಿಯಿಂದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಟೋದಲ್ಲಿ ಐದು ಶಾಲಾ ಮಕ್ಕಳಿಗೆ ಮೀರದಂತೆ, ಕಿರು ವ್ಯಾನ್ ವಾಹನದಲ್ಲಿ 10 ಮಕ್ಕಳು ಶಾಲೆಗಳು ಹೊಂದಿರುವ ಶಾಲಾ ಬಸ್ಸಿನಲ್ಲಿ 50 ಮಕ್ಕಳು ಮೀರದಂತೆ ಹೊತ್ತು ಸಾಗಾಬೇಕಾಗಿದೆ ಎಂದು ಅದೇಶ ಹೊರಡಿಸಿದೆ. ಶಾಲಾ ಮಕ್ಕಳ ಬ್ಯಾಗ್ ಮತ್ತು ಇತರ ವಸ್ತುಗಳನ್ನು ಗುರುತಿಸಿದ ಸ್ಥಳದಲ್ಲಿ ಇಡುವಂತೆ ಸೂಚನೆ ನೀಡಿರುತ್ತದೆ ಅಲ್ಲದೆ ಶಾಲಾ ಮಕ್ಕಳನ್ನು ಹೊತ್ತು ತರುವ ಚಾಲಕರು ವಾಹನದ ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು, ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಕೆ ಕಡ್ಡಾಯ, ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಇಲಾಖೆ ಚಾಲಕನ ಪರವಾನಿಗೆಯನ್ನು ರದ್ದುಗೊಳಿಸಲು ಅದೇಶವಿರುತ್ತದೆ. ಚಾಲಕರಲ್ಲಿ ಜಾಗೃತಿ ಮೂಡಿಸಲು ನಗರದ ಎಲ್ಲಡೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಲಾಗಿದೆ. ಕಾನೂನು ಪರಿಪಾಲನೆ ಮಾಡುವದು ನಮ್ಮೆಲ್ಲರ ಕರ್ತವ್ಯವೆಂದು ತಿಳಿದು ಇಲಾಖೆಯೊಂದಿಗೆ ಸಹಕರಿಸಿ ಎಂದು ಕೋರಿದರು.

ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಮಾತನಾಡಿ, ಶಾಲಾ ಮಕ್ಕಳನ್ನು ಕೊಂಡೊಯ್ಯುವ ವಾಹನಗಳಲ್ಲಿ ಶಾಲಾ ಕರ್ತವ್ಯ ಫಲಕ ಅಳವಡಿಸಿರಬೇಕು; ವಾಹನಗಳಿಗೆ ಜಿ.ಪಿ.ಅರ್.ಎಸ್ ಅಳವಡಿಸಬೇಕು ಇದರಿಂದ ವಾಹನದ ಇರುವಿಕೆಯ ಸ್ಥಳದ ಮಾಹಿತಿ ಪಡೆಯಬಹುದಾಗಿದೆ. ನ್ಯಾಯಾಲಯವು ನೀಡಿರುವ ಅದೇಶ ಉಲ್ಲಂಘನೆಯಾದಲ್ಲಿ 188 ಐ.ಪಿ.ಸಿ ಖಾಯ್ದೆಯ ಅನ್ವಯ ಪ್ರಕರಣ ದಾಖಲಿಸಬಹುದಾಗಿದೆ. ಸಂಚಾರಿ ನಿಯಮ ಆದೇಶದ ಪ್ರಕಾರ ವೇಗದ ಚಾಲನೆ, ನಿಯಂತ್ರಣವಿಲ್ಲದ ಚಾಲನೆ, ಅನುಚಿತ ವರ್ತನೆ, ಮೊಬೈಲ್ ಬಳಸಿ ಚಾಲನೆ ಹೀಗೆ ಕೆಲವು ಮಾನದಂಡ ಗಳಿಗೆ ರೂ. 500 ರಿಂದ 1000ಕ್ಕೂ ಮೇಲ್ಪಟ್ಟು ದಂಡ ವಿದಿಸಲಾಗುವದು. ಶಾಲಾ ಮಕ್ಕಳನ್ನು ಕೊಂಡೊಯ್ಯುವ ವ್ಯಾನ್, ಶಾಲಾ ಕಾಲೇಜು ಬಸ್ಸು ಮತ್ತು ಅಟೋಗಳು ಕಡ್ಡಾಯವಾಗಿ ಇಲಾಖೆಯಿಂದ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕಾಗಿದೆ. ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವದು ಅಪರಾಧವಾಗಿದೆ. ಕಾನೂನು ನಿಯಮಗಳಿಗೆ ಬದ್ಧರಾಗಿ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಪರಿಪಾಲನೆ ಮಾಡಬೇಕು ಎಂದು ಹೇಳಿದರು.

ಆಟೋ ಚಾಲಕ ಸಂಘದ ಅಧ್ಯಕ್ಷ ಶಶಿಧರನ್ ಮಾತನಾಡಿ. ಆಟೋ ಜನಮಿತ್ರರಾಗಿ ಸೇವೆ ಸಲ್ಲಿಸುತ್ತಿದೆ. ಹೆಚ್ಚಿನ ಶಾಲಾ ಮಕ್ಕಳಿಗೆ ಅಟೋ ಎಂದರೆ ಎಲ್ಲಿಲ್ಲದ ಪ್ರೀತಿ, ಇಂದು ನ್ಯಾಯಾಲಯವು ವಿಧಿಸಿರುವ ನಿಯಮಗಳ ಪ್ರಕಾರ 6ಕ್ಕಿಂತ ಹೆಚ್ಚು ಮಕ್ಕಳನ್ನು ಕೊಂಡೊಯ್ಯುವದು ಅಪರಾಧವೆಂದು ಅದೇಶ ನೀಡಿರುವದು ಆಟೋ ಚಾಲಕನಿಗೆ ಅಘಾತ ತಂದಿದೆ. ಗ್ರಾಮಾಂತರ ಪ್ರದೇಶ ಮತ್ತು ನಗರ ಭಾಗದ ಆಟೋಗಳು ತಲಾ ಒಂದು ವಿದ್ಯಾರ್ಥಿಗೆ 500 ನಿಗದಿಗೊಳಿಸಿ 8 ಮಕ್ಕಳಿಗೆ 4000 ರೂ ನಂತೆ ಚಾಲಕ ಪಡೆಯುತ್ತಿದ್ದಾನೆ ಇದರಲ್ಲಿ ತಿಂಗಳ ಮೊದಲ ವಾರದಲ್ಲಿ ಪೋಷಕರಿಂದ ಪಡೆದ ಹಣವು ವಾಹನ ಸಾಲಕ್ಕೆ ಮರು ಪಾವತಿಸಲಾಗುತ್ತದೆ. ಬಿಡುವಿನ ಸಮಯದಲ್ಲಿ ಲಭಿಸಿದ ಬಾಡಿಗೆಯಿಂದ ಚಾಲಕನ ಮನೆ ಮತ್ತು ವಾಹನ ನಿರ್ವಹಣೆಗೆ ಸೀಮಿತವಾಗುತ್ತದೆ. ಶಾಲಾ ಮಕ್ಕಳ ಟ್ರಿಪ್ ಅವಲಂಭಿಸಿಕೊಂಡು ಜೀವನ ಮಾಡುವ ಚಾಲಕರು ಶೇ. 50 ಕ್ಕಿಂತ ಹೆಚ್ಚಿದ್ದಾರೆ. ಪ್ರಸ್ತುತ ನಿಯಮಗಳನ್ನು ಮಾನವಿಯ ಹಿತದೃಷ್ಟಿಯಿಂದ ಪುನರ್ ಪರಿಶೀಲನೆ ಮಾಡಿ ಕಾನೂನಿನಲ್ಲಿ ಸಡಿಲಿಕೆ ಮಾಡಿ 8 ಮಕ್ಕಳನ್ನು ಕೊಂಡೊಯ್ಯಲು ಅನುಮತಿ ನೀಡುವಂತೆ ಇಲಾಖಾಧಿಕಾರಿಗಳಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಸಂತ ಅನ್ನಮ್ಮ ಶಾಲೆಯ ಧರ್ಮಗುರುಗಳಾದ ರೆ.ಫಾ ಮುದಲೈ ಮುತ್ತು ಇದ್ದರು. ಚಾಲಕರಿಗೆ ಇಲಾಖೆಯ ವತಿಯಿಂದ ಕಿರು ಪರದೆಯ ಮೇಲೆ ವಾಹನ ಅಪಘಾತಗಳು ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವದು ಇತರ ಪ್ರಾತಿಕ್ಷಿಕೆಯನ್ನು ಭಿತ್ತರಿಸಲಾಗಿ ಚಾಲಕರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸಲಾಯಿತು.

ಕಾರ್ಯಾಗಾರದಲ್ಲಿ ನಗರ ಮತ್ತು ಗಾಮಾಂತರ ಪ್ರದೇಶ ಶಾಲಾ ಕಾಲೇಜು ವಾಹನಗಳ ಚಾಲಕರು, ನಿರ್ವಾಹಕರು, ಆಟೋ ಚಾಲಕರು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

-ಕೆ.ಕೆ.ಎಸ್., ವೀರಾಜಪೇಟೆ