ಕೂಡಿಗೆ, ಜು. 3: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೆಲವು ಪ್ರದೇಶಗಳು ಬಯಲು ಸೀಮೆಯ ವಾತಾವರಣಕ್ಕೆ ಅನುಗುಣ ವಾಗಿರುವದರಿಂದ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಜೋಳದ ಬೆಳೆಯನ್ನು ಬೆಳೆಯುತ್ತಾರೆ. ಆದರೆ, ಈ ಸಾಲಿನಲ್ಲಿ ಮಾರ್ಚ್- ಏಪ್ರಿಲ್‍ನಲ್ಲಿ ಮಳೆ ಬರದಿದ್ದರೂ ಮೇ ತಿಂಗಳಲ್ಲಿ ಸ್ವಲ್ಪ ಪ್ರಮಾಣದ ಮಳೆ ಬಿದ್ದ ಹಿನ್ನೆಲೆಯಲ್ಲಿ ರೈತರು ಭೂಮಿಯನ್ನು ಹದಗೊಳಿಸಿ ಜೋಳ ಬಿತ್ತನೆ ಮಾಡಿದ್ದರು. ತದ ನಂತರ ಮಳೆ ಇಲ್ಲದ ಪರಿಣಾಮ ಬಿತ್ತನೆ ಮಾಡಿದ ಜೋಳವು ಚಿಗುರುತ್ತಿರುವಾಗಲೇ ಬಿಸಿಲಿಗೆ ಒಣಗುತ್ತಿದೆ. ಅದರಲ್ಲೂ ಅಳಿದುಳಿದ ಜೋಳಕ್ಕೂ ರೋಗ ತಗುಲಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸೀಗೆಹೊಸೂರು, ಸಿದ್ಧಲಿಂಗಪುರ, ಅಳುವಾರ ಪ್ರದೇಶಗಳಲ್ಲಿ ಜೋಳಕ್ಕೆ ರೋಗ ತಗುಲಿದ್ದು, ರೈತರು ಔಷಧಿಯನ್ನು ಸಿಂಪಡಿಸಿದರೂ ಯಾವದೇ ಪ್ರಯೋಜನವಾಗದೆ ರೈತರು ಆತಂಕದಲ್ಲಿದ್ದಾರೆ.