ವೀರಾಜಪೇಟೆ, ಜು. 3: ದಕ್ಷಿಣ ಕೊಡಗಿನಲ್ಲಿ ಬೀಳುತ್ತಿರುವ ಮಳೆಯಿಂದ ಈಗಾಗಲೇ ಕಾಯಿಕಟ್ಟಿರುವ ಕಾಫಿ ಫಸಲಿಗೆ ಕಂಬಳಿಹುಳುಗಳ ಕಾಟ ಎದುರಾಗಿದ್ದು ಬೆಳೆಗಾರರ ನಿದ್ದೆಗೆಡಿಸಿದೆ. ಕಾಫಿ ಸೇರಿದಂತೆ ಇತರ ಉಪ ಬೆಳೆಗಳ ಎಲೆಗಳೇ ಕಂಬಳಿ ಹುಳಗಳಿಗೆ ಆಹಾರವಾಗಿದ್ದು, ತೋಟದೊಳಗೆ ಕೆಲಸ ನಿರ್ವಹಿಸುವ ಸಂದರ್ಭ ಕಾರ್ಮಿಕರಿಗೂ ಕಂಟಕವಾಗಿ ಪರಿಣಮಿಸಿದೆ.
ತಾಲೂಕಿನ ಬೇಗೂರು ಗ್ರಾಮದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ತೋಟದಲ್ಲಿರುವ ಇತರ ಮರಗಳ ಎಲೆಗಳು ಕಾಫಿ ಗಿಡದ ಮೇಲೆ ಬಿದ್ದು, ಕಾಫಿ ಗಿಡದ ರೆಂಬೆ-ಕೊಂಬೆಗಳು, ಎಲೆಗಳು, ಕಾಯಿ ಕಟ್ಟಿರುವ ಫಸಲು ಕೊಳೆಯುತ್ತಿವೆ. ಈ ಮಧ್ಯೆ ತೋಟದಲ್ಲಿ ಅಸಂಖ್ಯಾತ ಸಂಖ್ಯೆಯ ಕಂಬಳಿ ಹುಳುಗಳು ಉತ್ಪತ್ತಿಯಾಗಿದ್ದು, ಬೆಳೆಗಾರ ವರ್ಗವನ್ನು ಇನ್ನಿಲ್ಲದ ಸಂಕಷ್ಟಕ್ಕೆ ತಳ್ಳಿದೆ.
ವೀರಾಜಪೇಟೆ, ಪೊನ್ನಂಪೇಟೆ, ಬೇಗೂರು, ಕುಂದಾ, ಶ್ರೀಮಂಗಲ ಮರೆನಾಡು, ಹೋಬಳಿ ವ್ಯಾಪ್ತಿಯಲ್ಲಿ ಕಂಬಳಿ ಹುಳುಗಳ ಕಾಟ ಅಧಿಕವಾಗಿದೆ. ಕಾಫಿ ತೋಟ ಸೇರಿದಂತೆ ಅರಣ್ಯ ಪ್ರದೇಶದಲ್ಲೂ ಯಥೇಚ್ಛವಾಗಿ ಕಂಬಳಿ ಹುಳುಗಳು ಉತ್ಪತ್ತಿಯಾಗುತ್ತಿದ್ದು, ಕಾಫಿ ಗಿಡದ ಎಲೆಗಳನ್ನು ತಿನ್ನಲು ಪ್ರಾರಂಭಿಸಿವೆ.
ಸುಮಾರು 5 ರಿಂದ 6 ತಿಂಗಳವರೆಗೂ ಜೀವಿಸಬಲ್ಲ ಕಂಬಳಿಹುಳುಗಳು ಅಧಿಕ ಸಂಖ್ಯೆಯಲ್ಲಿ ತೋಟದಲ್ಲಿ ಕಂಡುಬರುತ್ತಿದ್ದು, ಕಾಫಿ ಎಲೆಗಳನ್ನು ತಿನ್ನುತ್ತಿವೆ. ಎಲೆಗಳನ್ನು ಕಳೆದುಕೊಂಡ ಗಿಡಗಳು ಮುಂಚಿನ ಸ್ಥಿತಿಗೆ ಬರಲು ಕನಿಷ್ಟ 2 ವರ್ಷ ಬೇಕಾಗುತ್ತದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಜೂನ್-ಜುಲೈ ತಿಂಗಳಲ್ಲಿ ಕಂಬಳಿಹುಳುಗಳ ಸಂತಾನೋತ್ಪತ್ತಿ ಅಧಿಕವಾಗಿರುತ್ತವೆ. ಮೊಟ್ಟೆಯೊಡೆದು ಹೊರ ಬರುವ ಹುಳುಗಳು ಎರಡು ಮೂರು ದಿನಗಳಲ್ಲಿ ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಕಾಫಿ, ಕಾಳುಮೆಣಸು, ನೇರಳೆ, ಸಿಲ್ವರ್, ಸೇರಿದಂತೆ ಕಾಫಿ ತೋಟದಲ್ಲಿ ಬೆಳೆಯುವ ಇತರ ಗಿಡ ಮರಗಳ ಎಲೆಗಳೇ ಇವುಗಳಿಗೆ ಆಹಾರವಾಗಿವೆ.
ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ಕೋಶಾವಸ್ಥೆಯಲ್ಲಿರುವ ಕೀಟಗಳನ್ನು ಸಂಗ್ರಹಿಸಿ ಸುಟ್ಟು ಹಾಕಬೇಕು. ಪತಂಗಗಳು ಹೆಚ್ಚಿರುವ ಪ್ರದೇಶಗಳಲ್ಲಿ ವಿದ್ಯುದ್ದೀಪಗಳನ್ನು ಹಾಕಿ ಬೆಳಕಿಗೆ ಆಕರ್ಷಣೆಗೊಂಡ ಪತಂಗಗಳನ್ನು ಕಲೆಹಾಕಿ ಸುಟ್ಟರೆ ಮಾತ್ರ ಕಂಬಳಿ ಹುಳುಗಳ ನಿಯಂತ್ರಣ ಸಾಧ್ಯ ಎಂದು ಕಾಫಿ ಮಂಡಳಿಯವರು ಹೇಳುತ್ತಾರೆ.
ಕಂಬಳಿ ಹುಳುಗಳ ಆಮೂಲಾಗ್ರ ನಿಯಂತ್ರಣದ ಬಗ್ಗೆ ಯಾವದೇ ಸ್ಪಷ್ಟ ಮಾಹಿತಿ ಬೆಳೆಗಾರರಿಗೆ ಇಲ್ಲವಾಗಿದೆ. ಕ್ರಿಮಿಕೀಟಗಳಿಗೆ ಆಗಾಗ್ಗೆ ಔಷಧಿಗಳನ್ನು ಸಿಂಪಡಿಸಲಾಗುತ್ತಿದ್ದರೂ ಸಹ ಕಂಬಳಿ ಹುಳುಗಳ ನಿಯಂತ್ರಣ ಅಸಾಧ್ಯದ ಕೆಲಸವಾಗಿದೆ. ಎತ್ತರದ ಮರಗಳ ಎಲೆ ಅಡಿಯಲ್ಲಿ ಪತಂಗಗಳು ಮೊಟ್ಟೆಯಿಡುವದರಿಂದ ಕೋಶಾವಸ್ಥೆಯಲ್ಲಿಯೇ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಈ ಬಗ್ಗೆ ಕಾಫಿ ಮಂಡಳಿಯ ತಜ್ಞರು ಪರಿಹಾರೋಪಾಯಗಳನ್ನು ಕಂಡು ಹಿಡಿಯಬೇಕೆಂದು ಕಾಫಿ ಬೆಳೆಗಾರರು ಅಭಿಪ್ರಾಯಿಸಿದ್ದಾರೆ.
- ಹರ್ಷಿತ್ ಪೂವಯ್ಯ ಮತ್ರಂಡ