ಮಡಿಕೇರಿ, ಜು. 3: ಕಳೆದ ನಾಲ್ಕು ದಿನಗಳ ಹಿಂದೆ ಅಮ್ಮತ್ತಿ ಬಳಿಯ ಎಸ್ಟೇಟ್‍ವೊಂದರಲ್ಲಿ ಕಾಡಾನೆ ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡಿರುವ ಕಾರ್ಮಿಕ ಮಹಿಳೆ ಕಮಲಾ (55) ಅವರಿಗೆ ಅರಣ್ಯ ಇಲಾಖೆ ಪರಿಹಾರ ನೀಡದೆ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಸಿದ್ದಾಪುರದ ಬೀಟಿತೋಟ ಕಾರ್ಮಿಕ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ದಾಳಿ ಸಂಬಂಧ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಘಟನೆ ನಡೆದು ಎರಡು ದಿನ ಕಳೆದರೂ ಅಧಿಕಾರಿಗಳು ಭೇಟಿ ನೀಡಿಲ್ಲ.

ಇನ್ನು ಮುಂದಿನ 24 ಗಂಟೆಯೊಳಗೆ ಕಮಲಾ ಅವರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡದೇ ಇದ್ದಲ್ಲಿ ಅರಣ್ಯ ಇಲಾಖೆಯ ಎದುರು ಮಹಿಳಾ ಸಂಘಟನೆಗಳನ್ನು ಸೇರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಬೀಟಿತೋಟ ಕಾರ್ಮಿಕ ಮಹಿಳೆಯರು ಎಚ್ಚರಿಸಿದರು.

ಕಾರ್ಮಿಕ ಮಹಿಳೆ ಚೆಲುವರಾಣಿ ಮಾತನಾಡಿ, ಬಿಬಿಟಿಸಿ ಸಂಸ್ಥೆಗೆ ಸೇರಿದ ಬೀಟಿಕಾಡು ಕಾಫಿ ತೋಟದ ಕಾರ್ಮಿಕೆ ಕಮಲಾ ಕೆಲಸ ಮುಗಿಸಿ ಮನೆಗೆ ಹಿಂತಿರುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದೆ. ಇದರಿಂದ ಕಮಲಾ ಅವರ ಸೊಂಟ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಗಾಯಾಳುವನ್ನು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಮಹಿಳೆಯ ಸಂಘಟನೆಗಳು ಸೇರಿ ಕರೆದುಕೊಂಡು ಬರಲಾಗಿದೆ ಎಂದು ಚೆಲುವರಾಣಿ ವಿವರಿಸಿದರು. ಜಿಲ್ಲಾ ಒಡಿಪಿ ಸಂಸ್ಥೆ ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೇಜಸ್, ಶಕ್ತಿಶ್ವೇರಿ ಸಂಘದ ಸದಸ್ಯರಾದ ಪವಿತ್ರ, ವಿಜಯಲಕ್ಷ್ಮಿ, ಆಶಾ ಹಾಜರಿದ್ದರು.