ವೀರಾಜಪೇಟೆ, ಜು. 3: ಗ್ರಾಮೀಣ ಭಾಗದ ಕೃಷಿಕರು ಜಿಲ್ಲಾ ಪಂಚಾಯಿತಿ ವತಿಯಿಂದ ನೀಡುತ್ತಿರುವ ಸಿಲ್ವರ್ ಗಿಡಗಳು ಹಾಗೂ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳಿಂದ ವಿತರಿಸುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ಬೇಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ಮಹಿಳಾ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿ, ಗ್ರಾಮಾಂತರ ಪ್ರದೇಶದ ರಸ್ತೆ ಕಾಮಗಾರಿ ಕೆಲವು ಹಂತ ಮುಗಿದಿದ್ದು, ಉಳಿದಿರುವ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುವದು ಇದಕ್ಕೆ ಗ್ರಾಮಸ್ಥರು ಸಹಕಾರ ನೀಡುವಂತೆ ಹೇಳಿದರು.

ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಬಿ. ಚೋಂದಮ್ಮ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮದ ಪ್ರಮುಖರು ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗೆ ಆಹಾರ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಗೈರು ಹಾಜರಾಗು ತ್ತಿದ್ದಾರೆ. ಇದರಿಂದ ಗ್ರಾಮ ಸಭೆ ಅಪೂರ್ಣವಾಗುತ್ತಿದೆ ಎಂದು ದೂರಿದಾಗ ನೋಡಲ್ ಅಧಿಕಾರಿಗಳು ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿತು.

ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿಗಳಿಗೆ ಸ್ಥಳೀಯರು ಹೋಗಿ ಬೆಳಿಗ್ಗೆಯಿಂದ ಕಾದು ನಿಂತರೂ ಕೊನೆಗೆ ಕಂಪ್ಯೂಟರ್ ಸರಿಯಿಲ್ಲ ಎಂದು ಸಿಬ್ಬಂದಿಗಳು ಹೇಳಿ ಅರ್ಜಿದಾರರು ಹಿಂತಿರುಗುವಂತೆ ಹೇಳುತ್ತಾರೆ. ಹೊರ ರಾಜ್ಯದಿಂದ ಬಂದವರಿಗೆ ಪರೋಕ್ಷವಾಗಿ ಕತ್ತಲಾದರೂ ಒಂದೇ ದಿನದಲ್ಲಿ ಆಧಾರ್ ಮಾಡಿಕೊಡುತ್ತಿದ್ದಾರೆ. ತಾಲೂಕು ಕಚೇರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಇದಕ್ಕೆ ಸ್ಪಂದಿ ಸುತ್ತಿಲ್ಲ. ಸರಕಾರದ ಅಧಿಕಾರಿಗಳು ಸಿಬ್ಬಂದಿ ಆಧಾರ್ ಹಾಗೂ ಪಡಿತರ ದಾಖಲೆ ಕೇಂದ್ರದಲ್ಲಿ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ದೂರು ನೀಡಲು ಸಭೆ ತೀರ್ಮಾನಿಸಿತು.

ವೀರಾಜಪೇಟೆ-ಕೇರಳ ರಸ್ತೆಯಲ್ಲಿ ಗಾಂಜಾ ವ್ಯಾಪಾರ ನಡೆಯುತ್ತಿದ್ದರೂ ಇದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಕೇರಳದಿಂದ ಲಾರಿಯಲ್ಲಿ ಬಂದ ತ್ಯಾಜ್ಯಗಳನ್ನು ಮಾಕುಟ್ಟ ರಸ್ತೆಯಲ್ಲಿ ಕಂಡ ಕಂಡ ಸ್ಥಳಗಳಲ್ಲಿ ಸುರಿಯುತ್ತಿದ್ದಾರೆ. ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಅಧಿಕಾರಿಗಳು ನಿಗಾವಹಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಬೇಟೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಮ್ಮಣಕುಟ್ಟಂಡ ವಸಂತ್ ಕಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ಸತೀಶ್ ಹಾಗೂ ಗ್ರಾಮಸ್ಥರಾದ ಪಟ್ರಪಂಡ ರಘು ನಾಣಯ್ಯ, ಅಮ್ಮಣಕುಟ್ಟಂಡ ಕಿರಣ್ ಸುಬ್ರಮಣಿ, ಎ.ಯು. ಗಣೇಶ್, ಅಚ್ಚಪಂಡ ಹರೀಶ್, ಬಿ.ಜೆ. ಬೋಪಣ್ಣ, ಅವರುಗಳು ಸಭೆಯಲ್ಲಿ ಮಾತನಾಡಿದರು.