ಹೆಬ್ಬಾಲೆ, ಜು. 3: ಪ್ರತಿಯೊಬ್ಬರು ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಸುಧಾರಣೆಗೆ ವಿಶೇಷ ಒತ್ತು ನೀಡುವದರೊಂದಿಗೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂದು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಕುರಿತು ಶಿರಂಗಾಲ ಗ್ರಾಮದಲ್ಲಿ ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆ ವತಿಯಿಂದ ತಾಯಿ ಮಗುವಿನ ಆರೈಕೆ, ತಾಯಿ ಕಾರ್ಡ್, 104,108 ಆಂಬ್ಯುಲೆನ್ಸ್ ಕುರಿತು ಬೀದಿ ನಾಟಕ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು. ಈ ಸಂದರ್ಭ ಕಲಾವೇದಿಕೆ ಸಂಚಾಲಕ ಈ. ರಾಜು, ಕಲಾವಿದರಾದ ಚಂದ್ರಪ್ಪ, ಶಿವಕುಮಾರ್, ಎಂ. ರಾಜು, ಯಶೋಧ ಹಾಗೂ ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.