ಮಡಿಕೇರಿ, ಜು.1: ರೋಟರಿ ಜಿಲ್ಲೆಯ ಸೇವಾ ಯೋಜನೆಗಳಿಗಾಗಿ ಅಂತರರಾಷ್ಟೀಯ ರೋಟರಿ ಫೌಂಡೇಶನ್‍ಗೆ ಕುಶಾಲನಗರದ ಹಿರಿಯ ರೋಟರಿ ಸದಸ್ಯ, ಉದ್ಯಮಿ ಎಸ್.ಕೆ. ಸತೀಶ್ 10 ಸಾವಿರ ಡಾಲರ್ ಕೊಡುಗೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲೆ 3181 ನ ನೂತನ ಗವರ್ನರ್ ಆಗಿ ಜೊಸೇಫ್ ಮ್ಯಾಥ್ಯು ಪದಗ್ರಹಣ ಕಾರ್ಯಕ್ರಮದಲ್ಲಿ ಸತೀಶ್ ರೋಟರಿ ಜಿಲ್ಲೆಯ ಯೋಜನೆಗಳಿಗೆ 10 ಸಾವಿರ ಡಾಲರ್ (6.60 ಲಕ್ಷ ರೂ.) ಕೊಡುಗೆ ನೀಡಿದರು.
ಈ ಸಂದರ್ಭ ಸತೀಶ್ ಮತ್ತು ಎಸ್.ಶೋಭಾ ದಂಪತಿಯನ್ನು ಸನ್ಮಾನಿಸಿ ಮಾತನಾಡಿದ ಅಂತರ್ರಾಷ್ಟ್ರೀಯ ರೋಟರಿ ನಿರ್ದೇಶಕ ಡಾ.ಭರತ್ ಪಾಂಡ್ಯ, ಇಂಥ ಕೊಡುಗೆಗಳಿಂದ ರೋಟರಿ ಮತ್ತಷ್ಟು ಜನರಿಗೆ ಸೇವಾ ಯೋಜನೆಗಳನ್ನು ತಲಪಿಸಲು ಸಾಧ್ಯವಾಗುತ್ತದೆ ಎಂದರು.
ಕೊಡಗು ಜಿಲ್ಲೆಯ ಜಲಪ್ರಳಯ ಸಂತ್ರಸ್ತರಿಗೆ ರೋಟರಿ ವತಿಯಿಂದ 25 ಮನೆಗಳನ್ನು ನಿರ್ಮಿಸುವ ಮೂಲಕ ರೋಟರಿಯು ಮಹತ್ವದ ಕಾರ್ಯಕೈ ಗೊಂಡಿದ್ದು, ಮತ್ತೆ 15 ಮನೆ ನಿರ್ಮಾಣಕ್ಕೆ ಮುಂದಾಗಿರುವದು ಶ್ಲಾಘನೀಯ. ಈ ಕಾರ್ಯಕ್ಕೆ ಅಗತ್ಯ ಆರ್ಥಿಕ ನೆರವು ದೇಶದಾದ್ಯಂತಲಿನ ರೋಟರಿ ಸಂಸ್ಥೆಗಳಿಂದ ಬರಲಿ ಎಂದು ಭರತ್ ಪಾಂಡ್ಯ ಹಾರೈಸಿದರು.
ತಾವು ರೋಟರಿಗೆ ನೀಡಿದ 10 ಸಾವಿರ ಡಾಲರ್ ಕೊಡುಗೆ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಕೆ.ಸತೀಶ್, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಟ ಸಂಘಟನೆಯಾದ ರೋಟರಿ ಫೌಂಡೇಷನ್ ಮೂಲಕ ಸುಮಾರು 6.60 ಲಕ್ಷ ರೂ. ಆರ್ಥಿಕ ನೆರವನ್ನು ನೀಡುತ್ತಿದ್ದು, ಈ ಹಣ ಜಗತ್ತಿನ ಯಾವದೇ ಮೂಲೆಯಲ್ಲಿ ಅಗತ್ಯವುಳ್ಳವರಿಗೆ ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತದೆ ಎಂಬ ವಿಶ್ವಾಸ ತನಗಿದೆ. ಕುಶಾಲನಗರ ರೋಟರಿ ಸಂಸ್ಥೆಯ ಸ್ಥಾಪಕ ಸದಸ್ಯನಾಗಿ 44 ವರ್ಷಗಳ ಕಾಲ ರೋಟರಿ ಸದಸ್ಯನಾಗಿ ಸಮಾಜಕ್ಕೆ ತಾನು ನೀಡಿದ ಈ ಆರ್ಥಿಕ ಕೊಡುಗೆ ಮನಸ್ಸಿಗೆ ತೃಪ್ತಿ ತಂದಿದೆ ಎಂದರು. ಇಷ್ಟೊಂದು ಮೊತ್ತವನ್ನು ನೀಡಲು ತನ್ನ ಪತ್ನಿ ಶೋಭಾ ಬೆಂಬಲ ನೀಡಿದ್ದನ್ನೂ ಸತೀಶ್ ಸ್ಮರಿಸಿಕೊಂಡರು.
ಕುಶಾಲನಗರ ರೋಟರಿ ಪ್ರಮುಖರೂ ಸೇರಿದಂತೆ ರೋಟರಿ ವಲಯ 6 ರ ಸಹಾಯಕ ಗವರ್ನರ್ ಪಿ.ನಾಗೇಶ್ ಮತ್ತು ವಲಯದ ರೋಟರಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.