ಭಾಗಮಂಡಲ. ಜು. 1: ಸ್ಥಳೀಯರಿಗೆ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಭಾಗಮಂಡಲದ ಗೌಡ ಸಮಾಜದಲ್ಲಿ ನಿಗದಿಯಾಗಿದ್ದ ವಿಶೇಷ ಗ್ರಾಮಸಭೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ಮುಂದೂಡಿದ ಘಟನೆ ನಡೆದಿದೆ. ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಿಗದಿಯಾಗಿತ್ತು. ನೋಡಲ್ ಅಧಿಕಾರಿ ಜಗನ್ನಾಥ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಾಗಿದ್ದರು.

ವಾರದ ಹಿಂದೆ ಭಾಗಮಂಡಲಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಯವರು ಪ್ರವಾಹ ಪೀಡಿತ ಪ್ರದೇಶ ಭಾಗಮಂಡಲದಲ್ಲಿ ವಿಶೇಷ ಗ್ರಾಮಸಭೆ ನಡೆಸುವಂತೆ ಆದೇಶ ಹೊರಡಿಸಿದ್ದು, ಅದರಂತೆ ಗ್ರಾಮಸಭೆ ನಡೆಸಲು ಅಧಿಕಾರಿಗಳು ಮುಂದಾಗಿದ್ದರು. ಸಮರ್ಪಕ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಬೆರಳೆಣಿಕೆಯ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಜಯಂತ್ ಅವರು ಬೆರಳೆಣಿಕೆಯ ಜನರು ಇರುವದರಿಂದ ಸಭೆ ನಡೆಸುವದು ಹೇಗೆ ಎಂದು ಪ್ರಶ್ನಿಸಿದರು. ನೋಡಲ್ ಅಧಿಕಾರಿ ಜಯಂತ್ ಗ್ರಾಮಸಭೆ ನಡೆಸುವ ಬಗ್ಗೆ ಸೂಚಿಸಿದರು.

ಗ್ರಾಮಸಭೆಗೆ ಕನಿಷ್ಟ ಸಾರ್ವಜನಿಕರು ಭಾಗವಹಿಸಬೇಕು ಎಂಬ ನಿಯಮ ಬೈಲಾದಲ್ಲಿದೆ. ಕೇವಲ 10 ಜನರಿಗೆ ಸಭೆ ನಡೆಸುವದು ಎಷ್ಟು ಸೂಕ್ತ? ಜಯಂತ್ ಎಂದು ಪ್ರಶ್ನಿಸಿದರು. ನಂತರ ಅಧಿಕಾರಿ ಸಭೆಯನ್ನು ಮುಂದೂಡಿದರು.