ಮಡಿಕೇರಿ, ಜು. 2: ಭಾರತೀಯ ಚಿತ್ರರಂಗದಲ್ಲಿ ಇದೊಂದು ಹೊಸತನದ ವಿಚಾರ ಸ್ವತಃ ತಾಯಿ ನಿರ್ದೇಶಕಿಯಾಗಿದ್ದರೆ ಇವರ ಮೂರು ಮಕ್ಕಳು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇದು ಹೊಸ ದಾಖಲೆಯಾಗಲಿದೆ.
ಮೂಲತಃ ಕೊಡಗಿನವರಾದ ಹಲವಷ್ಟು ಚಿತ್ರಗಳಲ್ಲಿ ನಟಿಸಿರುವ ಹೆಸರಾಂತ ನಟ ಜೈಜಗದೀಶ್ ಅವರ ಚಿತ್ರ ಕುಟುಂಬದ ‘ಐ ಎಂಟರ್‍ಟೈನ್‍ಮೆಂಟ್’ ಬ್ಯಾನರ್‍ನ 25ನೆಯ ಚಿತ್ರವಾಗಿ ನಿರ್ಮಾಣ ಗೊಂಡಿರುವ ‘ಯಾನ’... (ಪ್ರಯಾಣ-ಜರ್ನಿ ಆಫ್ ಲೈಫ್) ಇದೇ ತಿಂಗಳ 12 ರಂದು ತೆರೆ ಕಾಣಲಿದೆ.
ನಟ ಜೈಜಗದೀಶ್ ಅವರ ಪತ್ನಿಯಾಗಿರುವ ವಿಜಯಲಕ್ಷ್ಮಿ ಸಿಂಗ್ ಈ ಚಿತ್ರದ ನಿರ್ದೇಶಕಿ ಯಾಗಿದ್ದರೆ, ಈ ದಂಪತಿಗಳ ಪುತ್ರಿಯರಾದ ವೈಭವಿ, ವೈನಿಧಿ ಹಾಗೂ ವೈಷ್ಣವಿ ಚಿತ್ರದಲ್ಲಿ ಮುಖ್ಯ ತಾರೆಯರಾಗಿ ನಟಿಸಿರುವದು ಈ ಚಿತ್ರದ ವಿಶೇಷತೆ.
ಹಾಸ್ಯ, ಗಂಭೀರತೆಯ ವಿಚಾರಗಳನ್ನು ಒಳಗೊಂಡಂತೆ ಈಗಿನ ಯುವ ಪೀಳಿಗೆ ಹಾಗೂ ಸಂಸಾರ ಸಮೇತರಾಗಿ ವೀಕ್ಷಿಸಬಹುದಾದ ಸಾಂಸಾರಿಕ ಚಿತ್ರ ಇದಾಗಿದೆ ಎಂದು ಈ ತಂಡದ ಪ್ರಯತ್ನದ ಹಿಂದಿರುವ ನಟ ಜೈಜಗದೀಶ್ ‘ಶಕ್ತಿ’ಗೆ ತಿಳಿಸಿದರು. ದುಬಯಿಯ ಉದ್ಯಮಿ ಹರೀಶ್ ಸಿರೇಗಾರ್ ಚಿತ್ರದ ನಿರ್ಮಾಪಕರಾಗಿದ್ದಾರೆ.
ಹಿರಿಯ ನಟರಾದ ಅನಂತ್‍ನಾಗ್, ಸುಹಾಸಿನಿ, ಸಾಧುಕೋಕಿಲ, ರಂಗಾಯಣ ರಘು ಅವರಂತ ಹವರೂ ಈ ಚಿತ್ರದಲ್ಲಿ ಪಾತ್ರಧಾರಿಗಳಾಗಿದ್ದಾರೆ.
ಕೊಡಗಿನ ಹಾರಂಗಿಯ ಸುತ್ತ ಮುತ್ತಲು, ಮೈಸೂರು, ಯಾನ, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ನಡೆದಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ.
ಈ ಚಿತ್ರ ‘ಬೆಸ್ಟ್ ಆಫ್ ಇಂಡಿಯನ್ ಮೂವೀಸ್’ನಲ್ಲಿ ಒಂದಾಗಲಿದೆ. ತಾಯಿ ನಿರ್ದೇಶಕಿ, ಮೂವರು ಮಕ್ಕಳು ನಟಿಯರಾಗಿರುವ ಉದಾಹರಣೆ ಬೇರೆ ಇಲ್ಲ. ಈ ಚಿತ್ರ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರುವದಾಗಿ ಜೈಜಗದೀಶ್ ಮಾಹಿತಿಯಿತ್ತರು. -ಶಶಿ