ಮಡಿಕೇರಿ, ಜು. 2: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ವತಿಯಿಂದ ಕೊಡಗು ಜಿಲ್ಲೆಯ ಸಾರ್ವಜನಿಕರ ಉಪಯೋಗಕ್ಕಾಗಿ ಮಂಗಳೂರಿನ ಎಚ್‍ಪಿಸಿಎಲ್‍ನ ಮಾರಾಟಾಧಿಕಾರಿ ಅರವಿಂದ್ ಮಿಶ್ರಾ ಅವರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸುಸ್ಸಜಿತವಾದ ಆ್ಯಂಬ್ಯುಲೆನ್ಸ್ ಹಸ್ತಾಂತರ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಇಂತಹ ಪೆಟ್ರೋಲಿಯಂ ಸಂಸ್ಥೆಗಳು ಸಾಮಾಜಿಕ ಕಾಳಜಿಯನ್ನು ಹೊತ್ತುಕೊಂಡು ಜನರ ಆರೋಗ್ಯದ ರಕ್ಷಣೆಗೆ ಹಾಗೂ ನಗರದ ಸ್ವಚ್ಛತೆಯ ಕಡೆಗೆ ಗಮನ ಹರಿಸುವಲ್ಲಿ ಹೆಚ್ಚಿನ ಜನಜಾಗೃತಿ ಹಾಗೂ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿರುವದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಅರವಿಂದ್ ಮಿಶ್ರಾ ಮಾತನಾಡಿ ಭಾರತ ಸರ್ಕಾರದ ಸಹಯೋಗದೊಂದಿಗೆ ಕೊಡಗು ಗುಡ್ಡಗಾಡು ಪ್ರದೇಶವಾಗಿರುವದರಿಂದ ಆರೋಗ್ಯದ ತುರ್ತು ರಕ್ಷಣೆಗೆ ಆ್ಯಂಬ್ಯುಲೆನ್ಸ್‍ನ ಅವಶ್ಯಕತೆ ಜಿಲ್ಲೆಗೆ ಇದೆ. ತಾ. 1 ರಿಂದ 15 ರವರೆಗೆ ಜಿಲ್ಲಾದ್ಯಂತ ಪೆಟ್ರೋಲ್ ಪಂಪುಗಳ ನೂರು ಗಜ ಅಂತರದವೆರೆಗೆ ಸ್ವಚ್ಛತೆಯನ್ನು ಕಾಪಾಡುವಂತೆ ಸ್ವಚ್ಛತಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಡಿಜಿಎಂ ವೇಣುಗೋಪಾಲ್, ಪ್ರಸನ್ನ ಪೂಜಾರಿ, ಡಿಜಿಎಂ ಆರ್. ರವೀಂದ್ರನ್ ಹಾಗೂ ಇತರರು ಹಾಜರಿದ್ದರು.