ಸೋಮವಾರಪೇಟೆ, ಜು. 2: ತಾಲೂಕಿನ ಹರಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕಾಮಗಾರಿ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದು, ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಂತಳ್ಳಿ-ಕಟ್ಟೆ- ಹರಗ ಸೇತುವೆ ಕಾಮಗಾರಿ ಕಳೆದ 1 ತಿಂಗಳಿನಿಂದ ಸ್ಥಗಿತ ಗೊಂಡಿದೆ. ಈ ಹಿಂದೆ ನಿರ್ಮಿಸ ಲಾಗಿದ್ದ ಸೇತುವೆ ಶಿಥಿಲಾವಸ್ಥೆಗೆ ತಲಪಿದ್ದು, ಬೃಹತ್ ವಾಹನಗಳ ಸಂಚಾರಕ್ಕೆ ತೀವ್ರ ತೊಡಕಾಗಿತ್ತು.

ಈ ಮಧ್ಯೆ ಸೇತುವೆಯ ಎರಡೂ ಬದಿಯ ತಡೆಗೋಡೆ ಕುಸಿದು ಬಿದ್ದಿದ್ದು, ತಳಭಾಗದಲ್ಲೂ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಹಳೆಯ ಸೇತುವೆಯ ಬದಲಿಗೆ ನೂತನ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರ ದಶಕಗಳ ಬೇಡಿಕೆಗೆ ಈ ವರ್ಷ ಇಲಾಖೆ ಸ್ಪಂದಿಸಿದ್ದು, ಕಳೆದ 3 ತಿಂಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಪ್ರಾರಂಭದಲ್ಲಿ ಶೀಘ್ರವಾಗಿ ನಡೆಯುತ್ತಿದ್ದ ಸೇತುವೆ ನಿರ್ಮಾಣ ಕಾಮಗಾರಿ ಕಳೆದ 1 ತಿಂಗಳಿನಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಈ ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ನೂತನ ಸೇತುವೆ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ಪೂರ್ಣಗೊಳಿಸಬೇಕು. ಕಳೆದ ಸಾಲಿನಂತೆ ಮಳೆ ಸುರಿದರೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಇದರೊಂದಿಗೆ ಹಳೆಯ ಸೇತುವೆ ಇನ್ನಷ್ಟು ಶಿಥಿಲಾವಸ್ಥೆಗೆ ತಲಪಿದ್ದು, ಅಪಾಯಕಾರಿಯಾಗಿಯೂ ಪರಿಣಮಿಸಿದೆ. ಈ ಹಿನ್ನೆಲೆ ನೂತನ ಸೇತುವೆ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಲು ಲೋಕೋಪಯೋಗಿ ಇಲಾಖೆ ಅಭಿಯಂತರರು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅವರು ‘ಸೇತುವೆ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದ್ದು, ಮುಂದಿನ ಒಂದು ವಾರದೊಳಗೆ ಕಾಮಗಾರಿ ಪ್ರಾರಂಭ ವಾಗಲಿದೆ. ಈಗಾಗಲೇ ‘ವಾಟರ್ ಲೆವೆಲ್’ನಿಂದ ಮೇಲಿನವರೆಗೆ ಕಾಮಗಾರಿ ಮುಕ್ತಾಯವಾಗಿದೆ. ಶೇ.40ರಷ್ಟು ಕೆಲಸಗಳು ಮುಕ್ತಾಯಗೊಂಡಿದ್ದು, ಮುಂದಿನ ಕಾಮಗಾರಿಗೆ ಕೇಂದ್ರ ಕಚೇರಿಯಿಂದ ‘ಡ್ರಾಯಿಂಗ್ ಫೈನಲ್’ ಆಗಬೇಕಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದ್ದು, ಮುಂದಿನ 2 ತಿಂಗಳೊಳಗೆ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ತಿಳಿಸಿದ್ದಾರೆ.