ಚೆಟ್ಟಳ್ಳಿ, ಜು. 2: ಕಳೆದ ಆಗಸ್ಟ್ ತಿಂಗಳ ಮಹಾಮಳೆಗೆ ತುತ್ತಾಗಿ ಮನೆ ಕಳೆದುಕೊಂಡ ಇಬ್ಬರು ಫಲಾನುಭವಿಗಳನ್ನು ಗುರುತಿಸಿ ಗೋಣಿಕೊಪ್ಪದ ಲಯನ್ಸ್ ಸಂಸ್ಥೆಯು ಅವರಿಗೆ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಿದೆ.

ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡ ಮಾದಾಪುರದ ಗರಗಂದೂರು ಕುಂಬಾರ ಬಾಣೆಯ ವಿಧವೆ ಮಿನ್ನಂಡ ಶಾಂತಿ ಮತ್ತು ಅವರ ಮಗಳಿಗೆ ಗೋಣಿಕೊಪ್ಪದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸ್ಮರಣ್ ಸುಭಾಷ್ ಮತ್ತು ಪದಾಧಿಕಾರಿಗಳು ಮಡಿಕೇರಿಯ ಕೊಡಗು ಸೇವಾ ಕೇಂದ್ರದ ಮುಖಾಂತರ ಫಲಾನುಭವಿಯಾಗಿ ಗುರುತಿಸಿ ಮನೆಯನ್ನು ನಿರ್ಮಿಸಿ ಕೊಡಲಾಯಿತು.

ಸಮಾರಂಭದಲ್ಲಿ ಲಯನ್ಸ್ ಸಂಸ್ಥೆಯ ಸಿ.ಎ. ಮುತ್ತಣ್ಣ ಅವರು ಸಂಸ್ಥೆಯ ಪರವಾಗಿ ಮಿನ್ನಂಡ ಶಾಂತಿ ಅವರ ಮನೆಯನ್ನು ಉದ್ಘಾಟಿಸಿದರು.

ಇನ್ನೊಬ್ಬ ಫಲಾನುಭವಿ ಸೂರ್ಲಬ್ಬಿ ಗೌಡಂಡ ಕಾವೇರಮ್ಮ ಅವರಿಗೆ ಸೂರ್ಲಬ್ಬಿಯಲ್ಲಿ ನಿರ್ಮಿಸಲಾದ ಮನೆಯನ್ನು ಬೆಂಗಳೂರಿನವರಾದ, ಮಾಜಿ ಲಯನ್ ಗವರ್ನರ್, ಪಿ.ಡಿ.ಜಿ. ಶ್ರೀನಿವಾಸ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸ್ಮರಣ್ ಸುಭಾಷ್ ಅವರು ತಾವು ಇನ್ನೂ ಮೂರು ಫಲಾನುಭವಿ ಗಳನ್ನು ಗುರುತಿಸಿದ್ದು, ಅವರಿಗೆ ಈ ವರ್ಷದ ಮಳೆಯನ್ನು ಗಮನದಲ್ಲಿಟ್ಟುಕೊಂಡು ಮನೆ ನಿರ್ಮಿಸಿಕೊಡಲಾಗುವದೆಂದರು. ಸಮಾರಂಭದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸ್ಮರಣ್ ಸುಭಾಷ್, ಕಾರ್ಯದರ್ಶಿ ಪಿ.ಎಂ. ಜೀವನ್, ಖಜಾಂಚಿ ಕೆ.ಪಿ. ಅಚ್ಚಯ್ಯ, ಗುತ್ತಿಗೆದಾರ ಪುತ್ತರಿರ ಪಪ್ಪು ತಿಮ್ಮಯ್ಯ ಉಪಸ್ಥಿತರಿದ್ದರು.