ಕುಶಾಲನಗರ, ಜು. 1: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಂಡುರಾವ್ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕುಶಾಲನಗರದ ನಾಗರಿಕರು ಆರೋಪಿಸಿದ್ದಾರೆ.
ತಾಲೂಕು ಸ್ತ್ರೀಶಕ್ತಿ ಸಂಘದ ಕಾರ್ಯದರ್ಶಿ ಎಚ್.ಎಂ.ಹೇಮ ಮತ್ತು ಸ್ಥಳೀಯ ಬಡಾವಣೆಯ ನಿವಾಸಿಗಳು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಆರೋಪಿಸಿದ್ದು ನೈಜ ನಿವೇಶನ ರಹಿತರನ್ನು ಗುರುತಿಸುವಲ್ಲಿ ಕುಶಾಲನಗರ ಪಪಂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ; ಅಧಿಕಾರಿಗಳು 312 ಜನರ ಪಟ್ಟಿ ತಯಾರಿಸಿದ್ದು ಅದರಲ್ಲಿ ಒಂದೇ ಕುಟುಂಬದ ಹಲವು ಮಂದಿಯ ಹೆಸರು ನಮೂದಿಸಲಾಗಿದೆ. ಕುಶಾಲನಗರ ಮಾಜಿ ಪಪಂ ಸದಸ್ಯರ 10 ಕ್ಕೂ ಅಧಿಕ ಮಂದಿಯ ಹೆಸರು ಸೇರ್ಪಡೆಗೊಳಿಸಲಾಗಿದೆ; ವಿದ್ಯಾರ್ಥಿ ಗಳ ಹೆಸರು ಪಟ್ಟಿಯಲ್ಲಿ ನಮೂದಾ ಗಿದ್ದು ಪಪಂ ಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಮ ಆರೋಪಿಸಿದ್ದಾರೆ.
312 ಮಂದಿಯ ಪಟ್ಟಿಯಲ್ಲಿ ಕುಶಾಲನಗರದ ಕೆಲವು ಸಂಘಸಂಸ್ಥೆಗಳ ಪ್ರಮುಖರ ಹೆಸರನ್ನು ಸೇರ್ಪಡೆಗೊಳಿಸಿದ್ದು ಕಂಡುಬಂದಿದ್ದು ಬಡ ಜನರನ್ನು ಕಡೆಗಣಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪಟ್ಟಿಯನ್ನು ರದ್ದುಗೊಳಿಸುವದರೊಂದಿಗೆ ಪ.ಪಂ.ಯ ಇಂಜಿನಿಯರ್ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ವಿವೇಕಾನಂದ ಬಡಾವಣೆಯ ನಿವಾಸಿಗಳಾದ ಕಾಳವ್ವ, ಪದ್ಮಿನಿ, ಕುಶಾಲನಗರದ ಕಾಳಮ್ಮ ಕಾಲನಿ, ವಿವೇಕಾನಂದ ಬಡಾವಣೆ ಬಹುತೇಕ ಕೂಲಿ ಕಾರ್ಮಿಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡುವಲ್ಲಿಯೂ ಪಂಚಾಯ್ತಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಸಕ್ತ ತಯಾರಿಸಿರುವ ಪಟ್ಟಿಯಲ್ಲಿ ಕುಶಾಲನಗರ ಪಟ್ಟಣ ಅಲ್ಲದೆ ನೆರೆಯ ಮೈಸೂರು, ಹಾಸನ ಜಿಲ್ಲೆಯ ಹಲವು ಮಂದಿಯ ಹೆಸರು ನಮೂದಿಸಲಾಗಿದೆ. ಅವಿವಾಹಿತ ಯುವಕ, ಯುವತಿಯರ ಹೆಸರು ಪಟ್ಟಿಯಲ್ಲಿ ಇರುವುದಾಗಿ ತಿಳಿಸಿರುವ ಕಾಳವ್ವ ತಕ್ಷಣ ಅಧಿಕಾರಿಗಳು ಪಟ್ಟಿಯನ್ನು ರದ್ದುಗೊಳಿಸಿ ನೂತನವಾಗಿ ನೈಜ ನಿವೇಶನ ರಹಿತರನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದ್ದಾರೆ.