ಗೋಣಿಕೊಪ್ಪಲು, ಜು. 1: ಆತ ಉಗ್ರರ ವಿರುದ್ಧ ಕಾದಾಡಿ ಶೌರ್ಯ ಚಕ್ರ ಪಡೆದ ವೀರ ಯೋಧ. ಟೆರರಿಸ್ಟ್ ಎನ್‍ಕೌಂಟರ್‍ನಲ್ಲಿ ಸ್ಪೆಷಲಿಸ್ಟ್.. ರಾಷ್ಟ್ರೀಯ ರೈಫಲ್ಸ್ 44ರ ಹೆಮ್ಮೆಯ ಸೋಲ್ಜರ್.. ಉಗ್ರರ ಎದೆಗೆ ಬುಲೆಟ್ ನುಗ್ಗಿಸೋದ್ರಲ್ಲಿ ನಿಸ್ಸೀಮ. ಆದ್ರೆ ಆ ದಿನ ನಡೆದ ಒಂದು ಆಪರೇಷನ್‍ನಲ್ಲಿ ಉಗ್ರನ ಗನ್‍ನಿಂದ ಹಾರಿದ ಬುಲೆಟ್ ವೀರ ಯೋಧನ ದೇಶ ಪ್ರೇಮದ ದೇಹದಿಂದ ರಕ್ತ ಚಿಮ್ಮಿಸಿತ್ತು. ದೇಶ ಪ್ರೇಮದ ಕಣ್ಣಿಗೆ ಕಾರ್ಗತ್ತಲು ಆವರಿಸಿತ್ತು.

ಭಾರತ ಮಾತೆಗೆ ಪ್ರಾಣ ಅರ್ಪಣೆಯಾಗ್ತಿದೆ ಎಂದು ಮನಸ್ಸು ಹೇಳುತ್ತಿತ್ತಾದ್ರೂ ಯೋಧನ ಬಂದೂಕಿನಿಂದ ಹಾರುವ ಬುಲೆಟ್ ನಿಲ್ಲಲಿಲ್ಲ. ಪಾಪಿ ಪಾಕ್ ಉಗ್ರರ ಮೇಲೆ ಗುಂಡಿನ ಮಳೆಗರೆಯುತ್ತಲೇ 200 ಮೀಟರ್ ಸಾಗಿ ಬದುಕಿ ಬಂದಿದ್ದಾನೆ ಭಾರತಾಂಭೆಯ ವೀರ ಪುತ್ರ... ಕೊಡಗಿನ ಹೆಮ್ಮೆಯ ಪುತ್ರ... ಇಲ್ಲಿದೆ ಕಾಶ್ಮೀರ ರಣಾಂಗಣದಲ್ಲಿ ಸಾವು ಗೆದ್ದು ಬಂದ ವೀರ ಯೋಧನ ವಾರ್ ಕಹಾನಿ.. 44ನೇ ಕಾಶ್ಮೀರದ ರಾಷ್ಟ್ರೀಯ ರೈಫಲ್ಸ್‍ಗೆ ಒಂದು ಮಾಹಿತಿ ಬರುತ್ತೆ. ಪಿಂಜೋರಾ ಗ್ರಾಮದ ಮನೆಯೊಂದರಲ್ಲಿ ಉಗ್ರರು ಅಡಗಿದ್ದಾರೆ ಅಂತ. ತಕ್ಷಣ 12, 12 ಮಂದಿಯ ಎರಡು ಎನ್‍ಕೌಂಟರ್ ಸ್ಪೆಷಲಿಸ್ಟ್ ತುಕಡಿ ಆಪರೇಷನ್‍ಗೆ ರೆಡಿಯಾಗಿತ್ತು. ಮಾಹಿತಿ ಬಂದ ಒಂದು ಗಂಟೆಯಲ್ಲಿ ಅಲ್ಲಿಗೆ ರೀಚ್ ಆಗಿತ್ತು ಎರಡು ತುಕಡಿ. ಒಂದು ಟೀಮ್ ಸರ್ಚಿಂಗ್ ಮಾಡ್ತಾ ಗ್ರಾಮವನ್ನ ಸುತ್ತುವರಿದಿದ್ರೆ ಮತ್ತೊಂದು ತುಕಡಿ ಉಗ್ರರಿದ್ದಾರೆ ಎಂದ ಮನೆಯನ್ನು ಸುತ್ತುವರಿದಿತ್ತು.

ಶಸ್ತ್ರಸಜ್ಜಿತವಾಗಿ 4 ಯೋಧರು ಮನೆಯೊಳಗೆ ನುಗ್ಗಿದ್ರು, ಮನೆ ಸರ್ಚ್ ಆಯ್ತು, ಯಾರೂ ಇರ್ಲಿಲ್ಲ, ಪಕ್ಕದ ಕೊಟ್ಟಿಗೆ ಸರ್ಚ್ ಮಾಡಿದ್ರೂ ಯಾರೂ ಸಿಗ್ಲಿಲ್ಲ, ಕಡೆಗೆ ಆಪಲ್ ಗೋಡೌನ್ ಬಳಿಗೆ ತೆರಳಿತ್ತು ನಾಲ್ವರು ಯೋಧರ ತಂಡ. ತಕ್ಷಣ ಆ ಕಡೆಯಿಂದ ಪೈರಿಂಗ್ ಸ್ಟಾರ್ಟ್ ಆಯ್ತು, ಇಮ್ಮೀಡಿಯೆಟ್ ವಿ ಶೇಪ್, ಜಿಗ್ ಜಾಗ್ ಪೊಸಿಷನ್ ತಗೊಂಡ ನಾಲ್ವರು ಯೋಧರು, ಪ್ರತಿದಾಳಿ ನಡೆಸಿದ್ರು ಉಗ್ರರ ಗುಂಡಿನ ಸುರಿಮಳೆ ಹೆಚ್ಚಾದಂತೆ ನಾಲ್ವರು ಯೋಧರ ಪೈಕಿ ಮೂವರು ಬ್ಯಾಕ್ ಪೊಸಿಷನ್ ತಗೊಂಬಿಟ್ರು, ಮುಂದೆ ಇದ್ದ ಕೆಚ್ಚೆದೆಯ ವೀರ, ನುಗ್ಗಿ ಬರುತ್ತಿದ್ದ ಬುಲೆಟ್‍ಗಳಿಗೆ ಶೀಲ್ಡ್ ಒಡ್ಡಿ ಫೈರ್ ಮಾಡ್ತಾ ಮುನ್ನುಗಿದ. ಅಷ್ಟರಲ್ಲಿ ಸೈಡಿಂದ ನುಗ್ಗಿ ಬಂದ ಬುಲೆಟ್ ಯೋಧನ ಕೆನ್ನೆಯ ಒಳನುಗ್ಗಿ ಹಣೆಯ ಭಾಗದಿಂದ ಹೊರಬಂದಿತ್ತು, ಇದರ ಪರಿವೇ ಇಲ್ಲದೆ ಭಾರತಾಂಬೆಯ ಪುತ್ರ, ಮುನ್ನುಗುತ್ತಿದ್ದ. ಕೆಲವೇ ಕೆಲವು ಸೆಕೆಂಡ್‍ಗಳಲ್ಲಿ ಬಲಭಾಗದ ಕಣ್ಣು ಮಬ್ಬು ಕವಿದಂತಾಯ್ತು.. ಮುಖದಿಂದ ರಕ್ತ ಚಿಮ್ಮುತ್ತಿತ್ತು, ಕಿವಿ, ಬಾಯಲ್ಲಿ ರಕ್ತ ಹರಿಯುತ್ತಿತ್ತು, ಗನ್‍ನಿಂದ ಹಾರುತ್ತಿದ್ದ ಬುಲೆಟ್ ನಿಧಾನವಾಯ್ತು, ಮೈಯೆಲ್ಲಾ ರಕ್ತದಿಂದ ಒದ್ದೆಯಾಯ್ತು.. ಆಗ ಕಾಂಪೌಂಡ್ ಬದಿಗೆ ಸರಿದು ಕುಳಿತ ಯೋಧನಿಗೆ ಗೊತ್ತಾಗಿದ್ದು, ತನ್ನ ಮುಖಕ್ಕೆ ಉಗ್ರರು ಹಾರಿಸಿದ ಬುಲೆಟ್ ಬಿದ್ದಿದೆ ಅಂತ. ಉಗ್ರನ ಗುಂಡಿಗೆ ಸಿಕ್ಕಿ ಬಿದ್ದು ಸಾಯಬಾರದು, ಭಾರತದ ಸೈನಿಕರ ಶಕ್ತಿ ಇಷ್ಟೇನಾ ಅನ್ನಿಸ್ಬಾರ್ದು, ನುಗ್ಗಿ ಹೊಡೆಯೋಣ ಅಂತ ಮನಸ್ಸಿಗೆ ಬಂತಾದರೂ ದೇಹ ಸಹಕರಿಸ್ತಿಲ್ಲ, ಸಾವಿನ ಕ್ಷಣಗಳು ಹತ್ತಿರವಾಗ್ತಿದ್ವು, ಗುಂಡಿನ ಮೊರೆತ ನಿಂತಿರಲಿಲ್ಲ, ನಾನು ಸತ್ತೋದ್ರೆ ಅಮ್ಮನ ನೋಡೋಕಾಗಲ್ಲ, ಎರಡು ದಿನದಲ್ಲಿ ತಂಗಿಯ ಡೆಲಿವರಿ, ಮಗವನ್ನು ನೋಡೋಕಾಗಲ್ಲ.. ಹೀಗೆ ಹತ್ತು ಹಲವು ಯೋಚನೆಗಳು ಮನಸ್ಸಿನಲ್ಲಿ ಮೂಡ್ತಿದ್ವು, ಇಷ್ಟಾದ್ರೂ ಎದೆಗುಂದದ ಯೋಧ ಮತ್ತೆ ಗನ್ ಎತ್ತಿ ಗುಂಡಿನ ಮಳೆಗರೆಯುತ್ತಾ ಮುನ್ನುಗ್ಗುವ ಮನಸ್ಸು ಮಾಡಿದ, ಅಷ್ಟರಲ್ಲಿ ಜೊತೆಗಿದ್ದ ಯೋಧರು, ಪಕ್ಕಕ್ಕೆ ಎಳೆದುಕೊಂಡ್ರು.. ಫೈರಿಂಗ್ ಜಾಸ್ತಿ ಮಾಡಿ ಉಗ್ರರ ಸಮೇತ ಮನೆಯನ್ನು ಬ್ಲಾಸ್ಟ್ ಮಾಡಿದ್ರು.. ಆಗ ಬದುಕಬೇಕು ಎಂಬ ಆಸೆ ಹುಟ್ಟಿತ್ತು, ತನ್ನೆಲ್ಲಾ ಶಕ್ತಿ ಒಗ್ಗೂಡಿಸಿ 200 ಮೀಟರ್ ರಕ್ತ ಸುರಿಸುತ್ತಾ ನಡೆದೇ ಬಂದ ಆ ಯೋಧ ಕಡೆಗೂ ಬದುಕಿದ... ಹಾಗೆ ಬದುಕಿ ಬಂದ ಆ ಕೆಚ್ಚೆದೆಯ ಯೋಧನೇ ರಾಷ್ಟ್ರೀಯ ರೈಫಲ್ಸ್ 44ರ ಶೌರ್ಯ ಚಕ್ರ ವಿಜೇತ ಎನ್‍ಕೌಂಟರ್ ಸ್ಪೆಷಲಿಸ್ಟ್, ಯಂಗ್ ಸೋಲ್ಜರ್ ಕೊಡಗಿನ ಹೆಚ್ ಎನ್ ಮಹೇಶ್... ಯೋಧ ಮಹೇಶ್‍ನ ಟೆರರಿಸ್ಟ್ ಎನ್‍ಕೌಂಟರ್ ಆಪರೇಷನ್ ಒಂದರ ರೋಚಕ ಕಹಾನಿ ಇದು..

ಹೆಚ್.ಎನ್. ಮಹೇಶ್, ಶೌರ್ಯ ಪ್ರಶಸ್ತಿ ಪಡೆದ ಯೋಧ ಹೆಮ್ಮೆಯ ಯೋಧ ಮಹೇಶ್ ಕಡೆಗೂ ಬದುಕಿ ಬಂದಿದ್ದಾರೆ. ಉಗ್ರರ ಗುಂಡೇಟಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಇವರನ್ನ ಸೇನಾಪಡೆ ಹರಸಾಹಸ ಪಟ್ಟು ಬದುಕಿಸಿದೆ. ಗ್ರಾಮಕ್ಕೆ ಬಂದ ಸೇನಾಪಡೆ ವಾಹನ ಹೊರಹೋಗದಂತೆ ರಸ್ತೆಗೆ ಹಾಕಿದ್ದ ಕಲ್ಲು ಮರಗಳನ್ನು ಸೀಳಿಕೊಂಡು ಸೇನಾ ವಾಹನ ಮಹೇಶ್ ಅವರನ್ನ ಕರೆತಂದು ಬದುಕಿಸಿದೆ. ಬೇಸ್ ಕ್ಯಾಂಪ್‍ನಿಂದ ಹೆಲಿಕಾಪ್ಟರ್‍ನಲ್ಲಿ ಶ್ರೀನಗರ ಅಲ್ಲಿಂದ ಪಂಜಾಬ್ ಕಮಾಂಡೋ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿದೆ. ಮೂರು ದಿನ ಪ್ರಜ್ಞೆ ಇಲ್ಲದೆ ಐಸಿಯುನಲ್ಲಿದ್ದ ಯೋಧ, ಚೇತರಿಕೆಯಾಗಿದ್ದು, ಒಂದು ತಿಂಗಳ ನಂತರ ತವರಿಗೆ ಬಂದಿದ್ದಾನೆ. ಆರ್ಮಿ ಯುನಿಟ್‍ನಿಂದ ಓರ್ವ ಯೋಧ ಕೂಡ ಇವರೊಂದಿಗೆ ಬಂದಿದ್ದಾರೆ. ಬದುಕಿ ಮನೆ ಸೇರಿರೋ ಕೊಡಗಿನ ವೀರ, ಭಾರತಾಂಬೆಯ ಪುತ್ರ ಕಡೆಗೂ ಅಪ್ಪ ಅಮ್ಮನ ನೋಡುವ ಹಾಗಾಯ್ತು, ತಂಗಿಯ ಮಗು ನೋಡಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಡ್ತಿದ್ದಾನೆ. ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ ಎರಡು ತಿಂಗಳ ಹಿಂದೆಯಷ್ಟೇ ಶೌರ್ಯ ಪ್ರಶಸ್ತಿ ಪಡೆದು ಮನೆಗೆ ಬಂದು ಹೋಗಿದ್ದ ಮಹೇಶ್ ತನಗೆ ಹೀಗಾಗಿದೆ ಎಂದು ಅಪ್ಪ ಅಮ್ಮನಿಗೆ ಹೇಳಿರಲಿಲ್ವಂತೆ.

ಅಲ್ಲಾದ ಸತ್ಯ ಗೊತ್ತಾಗಿದ್ದು ಮಗ ಚೇತರಿಕೆಯಾಗಿ ರೆಸ್ಟ್ ಗೆ ಅಂತ ಮನೆಗೆ ಬಂದು ಆ ಆಪರೇಷನ್ ಕ್ಷಣವನ್ನ ವಿವರಿಸಿದಾಗ.. ಸದ್ಯ ಪೊನ್ನಂಪೇಟೆಯ ತನ್ನ ಮನೆಯಲ್ಲಿರೋ ಯೋಧ, ರೆಸ್ಟ್ ಮುಗಿಸ್ಕೊಂಡು ಮತ್ತೆ ರಿ ಜಾಯಿನ್ ಆಗೋ ತವಕದಲ್ಲಿದ್ದಾರೆ. ವೀರ ಯೋಧನ ತಂದೆ ತಾಯಿ ಕೂಡ ಮತ್ತೆ ದೇಶ ಸೇವೆಗೆ ಮರಳು ಮಗ ಅಂತ ಹರಸುತ್ತಿದ್ದಾರೆ. ಒಟ್ನಲ್ಲಿ ಶೌರ್ಯ ಚಕ್ರ ಪಡೆದ ಕೊಡಗಿನ ವೀರ ಯೋಧ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡು ಬದುಕಿ ಬಂದಿದ್ದಾನೆ. ಸಂಪೂರ್ಣ ಚೇತರಿಕೆಯಾಗಿ ಮತ್ತೆ ತನ್ನ ಯುನಿಟ್‍ಗೆ ಮರಳಿ ಉಗ್ರರ ವಿರುದ್ಧದ ಸಮರದಲ್ಲಿ ಭಾಗಿಯಾಗೋ ತವಕದಲ್ಲಿದ್ದಾನೆ. ಆದಷ್ಟು ಬೇಗ ಯೋಧ ಚೇತರಿಕೆಯಾಗಲಿ, ಉಗ್ರರನ್ನ ಮಟ್ಟಹಾಕುವಲ್ಲಿ ಮಹೇಶ್ ಮತ್ತಷ್ಟು ಯಶಸ್ವಿಯಾಗಲಿ ಅನ್ನೋದು ನಮ್ಮ ಆಶಯ.