*ಗೋಣಿಕೊಪ್ಪಲು, ಜು. 1: ಪಂಚಾಯಿತಿ ಸದಸ್ಯರುಗಳು ವೈಯಕ್ತಿಕ ಕಲಹಗಳನ್ನು ಬಿಟ್ಟು ಪಂಚಾಯಿತಿಗೆ ಅಂಟಿರುವ ಕಸದ ಸಮಸ್ಯೆಗಳನ್ನು ಪರಿಹರಿಸಲು ಒಂದಾಗುವಂತೆ ಶಾಸಕ ಕೆ.ಜಿ. ಬೋಪಯ್ಯ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಪೆÇನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧದಲ್ಲಿ ನಡೆದ ಗೋಣಿಕೊಪ್ಪಲು, ಪೆÇನ್ನಂಪೇಟೆ, ಅರುವತ್ತೊಕ್ಲು ಗ್ರಾ.ಪಂ.ಗಳ ಕಸ ಸಮಸ್ಯೆ ಪರಿಹಾರದ ಸಭೆಯಲ್ಲಿ ಒಗ್ಗಟ್ಟಿನಿಂದ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು ಎಂದು ಶಾಸಕರು ಸೂಚಿಸಿದರು.
ಅಭಿವೃದ್ಧಿ ಅಧಿಕಾರಿಗಳು ಸದಸ್ಯರೊಂದಿಗೆ ಹೊಂದಾವಣೆ ಮಾಡಿಕೊಂಡು ತಾಳ್ಮೆಯಿಂದ ವರ್ತಿಸಿ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಸ್ಪಂದಿಸಬೇಕು ಎಂದು ಹೇಳಿದರು. ಗೋಣಿಕೊಪ್ಪಲು ಪಟ್ಟಣದಲ್ಲಿ ಕಸದ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತಿ ಸದಸ್ಯರು ಆಸಕ್ತರಾಗಬೇಕು. ಈ ಹಿಂದೆ ಸೂಚಿಸಿರುವ ಕಸ ವಿಲೇವಾರಿಗೆ ಮೀಸಲಾಗಿರುವ ಸೀತಾ ಕಾಲೋನಿಯಲ್ಲಿ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಮಾಡುವ ಘಟಕಕ್ಕೆ ವ್ಯವಸ್ಥಿತ ಸೌಕರ್ಯಗಳನ್ನು ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿ ಎಂದು ಹೇಳಿದರು.
ಕಸವಿಲೇವಾರಿಗೆಂದು ಗುರುತಿಸಿರುವ ಸ್ಥಳದಲ್ಲಿ ಕಸ ಹಾಕಲು ಬಿಡದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಿ. ಪೆÇಲೀಸರ ಭದ್ರತೆಯೊಂದಿಗೆ ಕಸ ವಿಲೇವಾರಿ ಮಾಡಲು ಪ್ರಯತ್ನಿಸಿ ಎಂದು ಪಿ.ಡಿ.ಓ. ಚಂದ್ರಮೌಳಿ ಅವರಿಗೆ ತಿಳಿಸಿದರು.
ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲ ಎಂದ ಮೇಲೆ ಬೇರೆಡೆಗೆ ಅವರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಿ ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭ ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ ಕಸ ಸಮಸ್ಯೆ ಬಗೆಹರಿಸಲು ಪಂಚಾಯಿತಿಯಿಂದ ಸರ್ಕಾರಿ ಪರವಾನಗೆ ಹೊಂದಿರುವ ಖಾಸಗಿ ಕಂಪೆನಿಯೊಂದಕ್ಕೆ ಟೆಂಡರ್ ನೀಡಲಾಗಿದೆ. ಕಾನೂರು, ಹುದಿಕೇರಿ ಗ್ರಾ.ಪಂ.ಗಳು ಈ ಕ್ರಮವನ್ನು ಅನುಸರಿಸಿವೆ. ಖಾಸಗಿ ಕಂಪೆನಿ ತಾವೇ ತಮ್ಮ ವಾಹನದಲ್ಲಿ ಮನೆ ಮನೆ ತೆರಳಿ ಕಸ ಸಂಗ್ರಹಿಸುತ್ತದೆ. ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯಗಳನ್ನು ವಿಂಗಡಿಸಿ ತಾವೇ ಕೊಂಡೊಯ್ಯಲಿವೆ. ಈ ಕ್ರಮಕ್ಕೆ ಪಂಚಾಯಿತಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು. ಸದಸ್ಯರುಗಳಾದ ಜೆ.ಕೆ. ಸೋಮಣ್ಣ, ರಾಮಕೃಷ್ಣ, ಪ್ರಮೋದ್ ಗಣಪತಿ, ಮುರುಗ, ಕೆ.ಪಿ. ಬೋಪಣ್ಣ ಸಲಹೆ ಸೂಚನೆಗಳನ್ನು ನೀಡಿದರು.
ಪೆÇನ್ನಂಪೇಟೆ ಗ್ರಾ.ಪಂ. ಬೇರೆ ಇಲಾಖೆಯ ಜಾಗವನ್ನು ನಂಬಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವದು ಬೇಡ. ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಂಡು ಕಸದ ಸಮಸ್ಯೆ ಉದ್ಬವಿಸದಂತೆ ಚಿಂತನೆ ಹರಿಸಿ ಮುಂದಿನ ವರ್ಷದಲ್ಲಿ ಉತ್ತಮ ಗ್ರಾಮ ಎಂದು ಪುರಸ್ಕಾರ ಪಡೆದುಕೊಳ್ಳಿ ಎಂದು ಶಾಸಕರು ಹೇಳಿದರು.
ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆ ಬದಿಗಳಲ್ಲಿ ರಾಶಿ ರಾಶಿಯಾಗಿ ಕಾಣುವ ಕಸ ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಮೈಸೂರಮ್ಮ ನಗರದ ನಿವಾಸಿಗಳು ಹಾಕುವ ಕಸವಾಗಿದೆ. ಈ ಬಗ್ಗೆ ಅರುವತ್ತೊಕ್ಲು ಗ್ರಾ.ಪಂ. ಕ್ರಮ ಕೈಗೊಂಡು ಮನೆ ಮನೆಗಳಿಗೆ ಕಸದ ವಾಹನವನ್ನು ಕಳುಹಿಸಿ ಕಸ ಸಂಗ್ರಹಿಸುವ ಮೂಲಕ ಸ್ವಚ್ಛತೆ ಕಾಪಾಡಬೇಕು ಎಂದು ಪಿ.ಡಿ.ಓ. ಶಂಕರನಾರಾಯಣ ಅವರಿಗೆ ತಿಳಿಸಿದರು.
ತಾಲೂಕು ದಂಡಾಧಿಕಾರಿ ಗೋವಿಂದರಾಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಕಂದಾಯ ಪರಿವೀಕ್ಷಕ ರಾಧಕೃಷ್ಣ, ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿರ ಚಲನ್, ಗೋಣಕೊಪ್ಪಲು ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಪೆÇನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರ, ಉಪಾಧ್ಯಕ್ಷೆ ಮಂಜುಳ, ಪಿ.ಡಿ.ಓ. ಪುಟ್ಟರಾಜು, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯರುಗಳಾದ ಮಂಜುಳ, ರತಿ ಅಚ್ಚಪ್ಪ, ಯಾಸ್ಮಿನ್, ರಾಜಶೇಖರ್, ಪೆÇನ್ನಂಪೇಟೆ ಗ್ರಾ.ಪಂ. ಸದಸ್ಯರುಗಳಾದ ಮೂಕಳೇರ ಲಕ್ಷ್ಮಣ್, ಕಾವ್ಯ, ಅಮ್ಮತ್ತಿರ ಸುರೇಶ್, ಅನೀಸ್, ಅರುವತ್ತೊಕ್ಲು ಗ್ರಾ.ಪಂ. ಸದಸ್ಯೆ ರೇವತಿ ಹಾಜರಿದ್ದರು.
ಚಿತ್ರ ವರದಿ: ಎನ್.ಎನ್ ದಿನೇಶ್