ಮಡಿಕೇರಿ, ಜು. 1: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗಾಗಿ ಅರ್ಜಿ ಸಲ್ಲಿಸಲು ನೂರಾರು ರೈತರು ಆರ್‍ಟಿಸಿಗಾಗಿ ಅಲೆದಾಡುತ್ತಾ; ಎಲ್ಲಿಯೂ ಲಭಿಸದೆ ಹೈರಾಣರಾದ ದೃಶ್ಯ ಇಂದು ಎದುರಾಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಆಡಳಿತ ಭವನ, ತಾಲೂಕು ಕಚೇರಿ, ಕೃಷಿ ಇಲಾಖೆ ಸಂಪರ್ಕ ಕೇಂದ್ರ, ಸಂಬಂಧಿಸಿದ ಗ್ರಾ.ಪಂ. ಕಚೇರಿಗಳಿಗೆ ಅಲೆದಾಡಿ ಸುಸ್ತು ಹೊಡೆದು ಬರಿಗೈನಲ್ಲಿ ತಮ್ಮ ತಮ್ಮ ಮನೆಗಳಿಗೆ ಹಿಂತೆರಳಬೇಕಾಯಿತು. ಈ ಸಂಬಂಧ ಯಾವ ಕಚೇರಿಗೆ ತೆರಳಿದರೂ ‘ಸರ್ವರ್’ ಸಮಸ್ಯೆ ಎಂಬ ಒಂದೇ ಉತ್ತರ ಕೇಳಿ ಬಂತು.
ಒಂದೆಡೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋಷಕರು ಜಾತಿ ಮತ್ತು ಆದಾಯ ದೃಢೀಕರಣಕ್ಕಾಗಿ ಅಲೆಯುವಂತಾದರೆ; ಇನ್ನೊಂದೆಡೆ ಪ್ರಧಾನ ಮಂತ್ರಿ ‘ಕಿಸಾನ್ ಸಮ್ಮಾನ್’ ಹಾಗೂ ‘ಆಯುಷ್ಮಾನ್ ಭಾರತ್’ ಫಲಾನುಭವಿಗಳಾಗಿ ಹೆಸರು ನೋಂದಾಯಿಸಲು ಸಾರ್ವಜನಿಕರ ಪರದಾಟ ಕಂಡು ಬಂತು. ದೂರದ ಊರುಗಳಿಂದ ಬಂದಿದ್ದ ಗ್ರಾಮೀಣ ಜನತೆ ತೀವ್ರ ಅಸಮಾಧಾನದೊಂದಿಗೆ ಗಣಕ ಯಂತ್ರ., ಸರ್ವರ್ ಇತ್ಯಾದಿ ಲೋಪಗಳನ್ನು ಕೇಳಿಸಿಕೊಂಡು ಏನೊಂದೂ ಅರ್ಥವಾಗದೆ ಹಿಂತೆರಳುತ್ತಿದ್ದ ಸನ್ನಿವೇಶ ಎದುರಾಯಿತು.
-ಮಿರರ್