ಮಡಿಕೇರಿ, ಜೂ. 30 : ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಬೇಕೆಂಬ ಅಭಿಯಾನದ ಕೂಗು ನಾಡಿನೆಲ್ಲೆಡೆ ವ್ಯಾಪಿಸುತ್ತಿರುವ ಬೆನ್ನಲ್ಲಿ ಈ ರೀತಿಯ ಆಸ್ಪತ್ರೆಯು ಅತ್ಯಂತ ಸೂಕ್ಷ್ಮ ಭೂ ಪ್ರದೇಶವನ್ನು ಹೊಂದಿರುವ ಕೊಡಗು ಜಿಲ್ಲೆಗೆ ಅಗತ್ಯವಿದೆಯೇ ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ನಂದಾ ಕಾರ್ಯಪ್ಪ ಪ್ರಶ್ನಿಸಿದ್ದಾರೆ. ಮಡಿಕೇರಿ ನಗರದ ವೈದ್ಯಕೀಯ ಕಾಲೇಜಿನ ಇಎನ್‍ಟಿ ವಿಭಾಗದ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಲೈವ್ ಸರ್ಜಿಕಲ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಬೃಹತ್ ಯೋಜನೆಯೊಂದು ಜಿಲ್ಲೆಯಲ್ಲಿ ಜಾರಿಯಾದರೆ ಮುಂದೆ ಎದುರಾಗಬಹುದಾದ ಅನಾಹುತಗಳ ಬಗ್ಗೆ ನಂದಾ ಕಾರ್ಯಪ್ಪ ಆತಂಕ ವ್ಯಕ್ತಪಡಿಸಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರತ್ಯೇಕ ಭೂಮಿಯನ್ನು ಗುರುತಿಸಿ ಆ ಭೂಮಿಯಲ್ಲಿರುವ ನೂರಾರು ಮರಗಳನ್ನು ತೆಗೆಯಬೇಕಾಗುತ್ತದೆ. ಅಲ್ಲದೆ, ಜೆಸಿಬಿ ಯಂತ್ರಗಳನ್ನು ಬಳಸಿ ಭೂ ಪ್ರದೇಶವನ್ನು ಅಗೆಯ ಬೇಕಾಗುತ್ತದೆ, ಇಂತಹ ಬೆಳವಣಿಗೆಗಳನ್ನು ಸೂಕ್ಷ್ಮ ಪ್ರದೇಶ ಕೊಡಗು ತಡೆದುಕೊಳ್ಳಬಹುದೇ ಎಂದು ಪ್ರಶ್ನಿಸಿದರು.
ರೈಲ್ವೆ ಮಾರ್ಗದಂತಹ ಯೋಜನೆಗಳ ಜಾರಿ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದ್ದು, ಇದರ ನಡುವೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆ, ಬೇಡವೇ ಎನ್ನುವ ಬಗ್ಗೆ ಗಂಭೀರ ಚಿಂತನೆ ನಡೆಯುವಂತಾಗಲಿ ಎಂದು ನಂದಾ ಕಾರ್ಯಪ್ಪ ಸಲಹೆ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಮಾತನಾಡಿ, ವೈದ್ಯರು ರೋಗಿಗಳ ಪಾಲಿಗೆ ದೇವರಿದ್ದಂತೆ, ಹಗಲು, ರಾತ್ರಿಯೆನ್ನದೆ ಸೇವೆ ಮಾಡುವ ವೈದ್ಯರ ಕಾರ್ಯ ಶ್ಲಾಘನೀಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಎನ್‍ಟಿ ತಜ್ಞ ಡಾ.ಮೋಹನ್ ಅಪ್ಪಾಜಿ, ಈ ರೀತಿಯ ಕಾರ್ಯಾಗಾರವನ್ನು ನಡೆಸುವದರಿಂದ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಜ್ಞಾನ ವೃದ್ದಿಯಾಗುತ್ತದೆ ಮತ್ತು ಅನುಭವಗಳು ದೊರೆತಂತಾಗುತ್ತದೆ ಎಂದರು. ಡಾ. ವಿಶಾಲ್ ರಾವ್ ಹಾಗೂ ಅಕ್ಷಯ್ ಕುಮಾರ್ ಥೈರಾಯ್ಡ್ ಖಾಯಿಲೆಗೆ ಸಂಬಂಧಿಸಿದಂತೆ ಕುತ್ತಿಗೆಯ ಭಾಗದಲ್ಲಿ ಲೈವ್ ಸರ್ಜರಿ ಮಾಡಿದ್ದಾರೆ. ಇದು ಒಂದು ಸವಾಲಿದ್ದಂತೆ, ಪ್ರತೀ 6 ತಿಂಗಳಿಗೊಮ್ಮೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕು ಎಂದರು. ಸೀನಿಯರ್ ಕೌನ್ಸಿಲರ್ ಎಂ.ಟಿ. ನಾಣಯ್ಯ ಮಾತನಾಡಿ ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆ ಇದೆ, ಆದರೆ ಮೊದಲು ರಸ್ತೆಗಳು ಉತ್ತಮ ರೀತಿಯಲ್ಲಿ ದುರಸ್ತಿಗೊಂಡಾಗ ಮಾತ್ರ ಅನಾಹುತಗಳನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು. ಡಾ.ವಿನಯ್, ಡಾ. ಶ್ವೇತಾ, ಡಾ. ಹೆಚ್.ಜೆ. ಶ್ರೀಕಾಂತ್ ಸೇರಿದಂತೆ ವೈದ್ಯ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.