ವೀರಾಜಪೇಟೆ, ಜೂ. 30: ವಿದ್ಯಾರ್ಥಿಗಳು ದುಷ್ಚಟಗಳಿಂದ ದೂರವಿರಲು ಪ್ರತಿವರ್ಷ ದುಷ್ಚಟದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ದುಷ್ಚಟಗಳ ಅರಿವಿನ ಜಾಗೃತಿ ಕಾರ್ಯಕ್ರಮಗಳನ್ನು 1991 ರಿಂದಲೂ ಆಯೋಜಿಸಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ನಿರ್ದೇಶಕರಾದ ಎ. ಯೋಗೀಶ್ ಹೇಳಿದರು.

ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದುಷ್ಚಟಗಳನ್ನು ದೂರಮಾಡಿ ಸಮಾಜಕ್ಕೆ ಮತ್ತು ದೇಶಕ್ಕೆ ಉತ್ತಮ ಪ್ರಜೆಗಳಾಗುವಂತೆ ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ದೇವಣಗೇರಿ ಬಿಸಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಅವರು ‘ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞೆ’ ಭೋದಿಸಿದರು.

ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕ ಟಿ.ಎನ್. ಕರುಣ್ ಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ಮಾದಕ ವಸ್ತುಗಳ ಬಗ್ಗೆ ‘ನಶೆಯೆಂಬ ನರಕ ಚಿತ್ರ’ದ ಮೂಲಕ ಸಾಕ್ಷಚಿತ್ರ ತೋರಿಸಲಾಯಿತು. ಈ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ರತ್ನ ಮೈಪಾಳ, ಕೃಷಿ ಮೇಲ್ವಿಚಾರಕ ಚೇತನ್, ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ, ಶೋಭಾ, ರಂಜನ್ ಉಪಸ್ಥಿತರಿದ್ದರು.

ಕುಶಾಲನಗರ: ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಕುಶಾಲನಗರದಲ್ಲಿ ಪೊಲೀಸರು ಕಾರ್ಯಕ್ರಮ ಹಮ್ಮಿಕೊಂಡರು. ಸ್ಥಳೀಯ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯ ಆಶ್ರಯದಲ್ಲಿ ಕನ್ನಡ ಭಾರತಿ ಪ.ಪೂ. ಕಾಲೇಜಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭ ಡಿವೈಎಸ್ಪಿ ಮುರಳೀಧರ್, ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಠಾಣಾಧಿಕಾರಿ ಜಗದೀಶ್, ಸೋಮೇಗೌಡ, ಅಪರಾಧ ವಿಭಾಗದ ಸದಾಶಿವ ಮತ್ತು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಯವರ್ಧನ ಇದ್ದರು.

ನಾಪೆÇೀಕ್ಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ, ಮಡಿಕೇರಿಯ ಬಿ.ಸಿ. ಟ್ರಸ್ಟ್, ಕೊಡಗು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಪ್ರಯುಕ್ತ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಡಾ. ಯೋಗೀಶ್ ಮಾತನಾಡಿ, ಇಂದು ರಾಜ್ಯಾದ್ಯಂತ ಸಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಿತ್ಯ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಿ.ಸಿ. ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ವಹಿಸಿದ್ದರು. ವೇದಿಕೆಯಲ್ಲಿ ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ, ಉಪನ್ಯಾಸಕ ಟಿ.ಎನ್. ಕರುಣ್ ಕುಮಾರ್, ಮತ್ತಿತರರು ಇದ್ದರು.

ಒಡೆಯನಪುರ: ಮಾದಕ ವಸ್ತುಗಳ ಸೇವನೆಯಿಂದ ದೈಹಿಕವಾಗಿ ಆರೋಗ್ಯ ಹಾಳಾಗುವದರ ಜೊತೆಗೆ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಇಂದೂಧರ್ ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ವಲಯದ ಗೌಡಳ್ಳಿ ಕಾರ್ಯಕ್ಷೇತ್ರದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಜನಜಾಗೃತಿ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸೋಮವಾರಪೇಟೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಅಲಾಜೆ ಪ್ರಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ವಿದ್ಯಾರ್ಥಿಗಳಿಗೆ, ಯುವ ಸಮೂಹಕ್ಕೆ ಮತ್ತು ಸಾರ್ವಜನಿಕರಿಗೆ ಮಾದಕ ಪದಾರ್ಥ ಸೇವನೆ ಸೇರಿದಂತೆ ಧೂಮಪಾನ, ಮದ್ಯಪಾನ ಮುಂತಾದ ನಶೆ ಪದಾರ್ಥಗಳ ಸೇವನೆಯ ದುಷ್ಪಾರಿಣಾಮಗಳ ಕುರಿತು ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಎನ್.ಕೆ. ನಾಗೇಂದ್ರ, ನವದುರ್ಗ ಪರಮೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಮುತ್ತಣ್ಣ, ಹಿರಿಯ ಆರೋಗ್ಯ ಸಹಾಯಕ ಮಹೇಶ್, ಉಷಾರಾಣಿ, ಕೃಷಿ ಮೇಲ್ವಿಚಾರಕಿ ಗೀತ, ಒಕ್ಕೂಟದ ಅಧ್ಯಕ್ಷೆ ಈಶ್ವರಿ, ಸೇವಾ ಪ್ರತಿನಿಧಿ ತಾರಮಣಿ, ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಹಾಜರಿದ್ದರು. ಈ ಸಂದರ್ಭದಲ್ಲಿ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಸೋಮವಾರಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗೌಡಳ್ಳಿ ಕಾರ್ಯಕ್ಷೇತ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಮಾದÀಕ ವಸ್ತುಗಳ ವಿರೋಧಿ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಉದ್ಘಾಟಿಸಿದರು. ನಂತರ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ದೇಹ ಮತ್ತು ಮನಸ್ಸಿನ ಹತೋಟಿ ತಪ್ಪುತ್ತದೆ. ಅಲ್ಲದೆ, ಧೂಮಪಾನ ಮತ್ತು ಮದ್ಯಪಾನಗಳ ಸೇವನೆಯಿಂದ ಕುಟುಂಬದ ನೆಮ್ಮದಿ ಕಳೆದುಕೊಳ್ಳುವದರೊಂದಿಗೆ, ನಮ್ಮ ಆರೋಗ್ಯವೂ ಹಾಳಾಗುತ್ತದೆ. ಯುವಜನರು ಸೇರಿದಂತೆ ಎಲ್ಲರೂ ಮಾದಕ ಪದಾರ್ಥಗಳ ಬಳಕೆಯಿಂದ ದೂರ ಇರಬೇಕೆಂದರು.

ಗ್ರಾಮಾಭಿವೃದ್ದಿ ಯೋಜನೆಯ ಸೋಮವಾರಪೇಟೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ, ಕ್ಷೇತ್ರದ ವತಿಯಿಂದ ರಾಜ್ಯದಾದ್ಯಂತ ವಿಶ್ವ ತಂಬಾಕು ವಿರೋಧಿ ದಿನಾಚರಣೆ ನಡೆಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ ಎಂದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಎನ್.ಕೆ. ನಾಗೇಂದ್ರ, ನವದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮುತ್ತಣ್ಣ, ಹಿರಿಯ ಆರೋಗ್ಯ ಸಹಾಯಕ ಮಹೇಶ್, ಸೇವಾ ಪ್ರತಿನಿಧಿಗಳಾದ ಉಷಾರಾಣಿ, ಮಹೇಶ್, ಶಾಲಾ ಶಿಕ್ಷಕರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಪೊಲೀಸ್, ವೀರಾಜಪೇಟೆ ಉಪ ವಿಭಾಗ ಹಾಗೂ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ಎನ್‍ಎಸ್‍ಎಸ್ ಘಟಕ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೋಣಿಕೊಪ್ಪಲು ಪೊಲೀಸ್ ಠಾಣೆ ಉಪ ನಿರೀಕ್ಷಕ ಶ್ರೀಧರ್ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿಗಳ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಅವರ ಕನಸನ್ನು ನೆರವೇರಿಸಿ ಹೆತ್ತವರ ತ್ಯಾಗಕ್ಕೆ ಅರ್ಥ ಕೊಡಬೇಕು ಎಂದರು.

ಗಾಂಜ, ಡ್ರಗ್ಸ್ ಮಾದಕ ವಸ್ತುಗಳ ಸಹವಾಸಕ್ಕೆ ಹೋಗದೇ ಉತ್ತಮ ಗೆಳೆಯರ ಒಡನಾಟ ಇಟ್ಟುಕೊಳ್ಳಬೇಕು. ಇತ್ತೀಚೆಗೆ ವಿದ್ಯಾರ್ಥಿಗಳು ಮೆಡಿಕಲ್ ಶಾಪ್‍ಗಳಲ್ಲಿ ಸಿಗುವ ಕೆಲವು ಮತ್ತುಬರಿಸುವ ಮಾತ್ರೆಗಳನ್ನು ತೆಗೆದುಕೊಳ್ಳುವದರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇಂತಹ ಮಾತ್ರೆಗಳನ್ನು ಯಾವದಾದರೂ ಮೆಡಿಕಲ್ ಶಾಪ್‍ಗಳು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವದು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದರು.

ಪ್ರೊಬೆಷನರಿ ಉಪ ನಿರೀಕ್ಷಕ ಶ್ರೀನಿವಾಸ್ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಈ ಸಂದರ್ಭ ಕಾವೇರಿ ಪದವಿಪೂರ್ವ ಕಾಲೇಜು ಉಪ ಪ್ರಾಂಶುಪಾಲೆ ಎಂ.ಕೆ. ಪದ್ಮ, ಪೊಲೀಸ್ ಸಿಬ್ಬಂದಿ ನಾಗೇಶ್, ಉಪನ್ಯಾಸಕರಾದ ಕೆ.ಎಂ. ಕುಸುಮ್, ಎಂ.ಆರ್. ಅಕ್ರಂ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಸುಂಟಿಕೊಪ್ಪ: ಯುವಜನತೆಯು ಮಾದಕ ವಸ್ತುಗಳ ಕಡೆಗೆ ಹೆಚ್ಚು ಆಕರ್ಷಿತರಾಗಿ ತಮ್ಮ ಜೀವನವನ್ನೇ ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ಠಾಣಾಧಿಕಾರಿ ಜಯರಾಂ ವಿಷಾದ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವ ಸಹಾಯ ಸಂಘ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣೆ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಹಾಗೂ ಅಂತರರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆಯ ಅಂಗವಾಗಿ ಕಾನ್‍ಬೈಲ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಾಳಗಿ ಆಗಮಿಸಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಗ್ರಾಮೀಣ ಮಹಿಳೆಯರ ಅಭ್ಯುದಯಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ನಾಕೂರು-ಶಿರಂಗಾಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೂಳ್ಳಪ್ಪ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಕಾಂತಿಕಾಮಣಿ, ಒಕ್ಕೂಟದ ಅಧ್ಯಕ್ಷೆ ಖತೀಜ, ಶಾಲಾ ಮುಖ್ಯೋಪಾಧ್ಯಾಯ ಮಂಜೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನೀತಾ, ಪೊಲೀಸ್ ಸಿಬ್ಬಂದಿಗಳಾದ ಖಾದರ್, ಸಂಪತ್, ಸೇವಾಪ್ರತಿನಿಧಿ ಯಶೋಧ ಬಸವರಾಜು, ಸಹಶಿಕ್ಷಕ, ಶಿಕ್ಷಕಿಯರು, ಸಂಘದ ಪದಾಧಿಕಾರಿಗಳು ಇದ್ದರು.