ಸೋಮವಾರಪೇಟೆ, ಜೂ. 30: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಲೋಡರ್ಸ್ ಕಾಲೋನಿಯಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಅಪೂರ್ಣಗೊಂಡು ಸ್ಥಳೀಯರಿಗೆ ಸಮಸ್ಯೆ ತಂದೊಡಿದ್ದ ಸ್ಥಳವನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪರಿಶೀಲಿಸಿದರು.
ಲೋಡರ್ಸ್ ಕಾಲೋನಿಯಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಕಲ್ಲು ಚಪ್ಪಡಿಗಳನ್ನು ಅಗೆದು ತೆಗೆಯಲಾಗಿದ್ದು, ಪೈಪ್ ಅಳವಡಿಸಿದ ನಂತರ ಸಮರ್ಪಕವಾಗಿ ಮುಚ್ಚದ ಹಿನ್ನೆಲೆ ಸಾರ್ವಜನಿಕರು ಮತ್ತು ಮಕ್ಕಳ ಓಡಾಟಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲಿ ಗಮನ ಸೆಳೆಯಲಾಗಿದ್ದು, ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ನಟರಾಜ್, ಅಭಿಯಂತರ ವೀರೇಂದ್ರ ಸೇರಿದಂತೆ ವಾರ್ಡ್ ಸದಸ್ಯ ಮಹೇಶ್ ಅವರುಗಳು, ಸ್ಥಳ ಪರಿಶೀಲಿಸಿದರು.
ಕಾಲೋನಿಯ ಒಳಗೆ ಕಲ್ಲು ಚಪ್ಪಡಿಗಳನ್ನು ತೆಗೆದು ಕಾಂಕ್ರೀಟ್ ರಸ್ತೆ ನಿರ್ಮಿಸಲು ತಕ್ಷಣ ಕ್ರಿಯಾಯೋಜನೆ ತಯಾರಿಸಲಾಗುವದು. ಸದ್ಯಕ್ಕೆ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಮುಖ್ಯಾಧಿಕಾರಿ ನಟರಾಜ್ ತಿಳಿಸಿದರು.
ಇದರೊಂದಿಗೆ ಪಟ್ಟಣದಲ್ಲಿ ಅಪ್ರಯೋಜಕವಾಗಿರುವ ಎರಡು ಉದ್ಯಾನವನಗಳ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವದು. ಈಗಾಗಲೇ ಎರಡೂ ಉದ್ಯಾನವನಗಳ ದುರಸ್ತಿಗೆ ತಲಾ 3.50 ಲಕ್ಷದಂತೆ ಕ್ರಿಯಾಯೋಜನೆ ತಯಾರಿಸಿದ್ದು, ಜಿಲ್ಲಾಧಿಕಾರಿಗಳೂ ಅನುಮೋದನೆ ನೀಡಿದ್ದಾರೆ ಎಂದು ನಟರಾಜ್ ಮಾಹಿತಿಯಿತ್ತರು.
ಮುಂದಿನ ಸೋಮವಾರದಿಂದ ಹುಲ್ಲು ಹಾಸಿನ ಕೆಲಸ ಪ್ರಾರಂಭವಾಗಲಿದೆ. ಉದ್ಯಾನವನದಲ್ಲಿ ಬೋರ್‍ವೆಲ್ ಕೊರೆಯಿಸುವದು, ಪೈಪ್‍ಲೈನ್, ಪಂಪ್‍ಸೆಟ್ ಅಳವಡಿಸಲು ತಕ್ಷಣವೇ ಟೆಂಡರ್ ಕರೆಯಲಾಗುವದು ಎಂದು ಮಾಹಿತಿ ನೀಡಿದರು.