ಶನಿವಾರಸಂತೆ, ಜೂ. 30: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ನಿನ್ನೆ ದಿನ ಸಾಧಾರಣ ಮಳೆ ಸುರಿಯಿತು. ಜಿಟಿಜಿಟಿ ಸುರಿಯಲಾರಂಭಿಸಿದ್ದರೂ ಆಗಾಗ್ಗೆ ಬಿಸಿಲು ಮೂಡುತ್ತಿತ್ತು. ಇದ್ದಕ್ಕಿದ್ದಂತೆ ಜೋರಾಗಿ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸುತ್ತಿತ್ತು. ಮುಂಗಾರು ಚುರುಕುಗೊಳ್ಳುವ ಲಕ್ಷಣ ಕಂಡುಬಂದಿತು. ಸಂತೆಯ ದಿನ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ತಕ್ಷಣ ಸುರಿದು ಹೋಗಬಹುದೆಂಬ ಭಾವನೆಯಿಂದ ಕೊಡೆ ತಾರದ ಕೆಲ ಗ್ರಾಹಕರು ಮಳೆಯಲ್ಲಿ ಸಿಲುಕಿ ಪಜೀತಿಪಡುತ್ತಿದ್ದರು. ಮಳಿಗೆಗಳಿಲ್ಲದೆ ಪ್ಲಾಸ್ಟಿಕ್ ಶೀಟಿನಡಿ ಕುಳಿತು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೂ ಪರದಾಡುವಂತಾಗಿತ್ತು. ಸಂಜೆ ವೇಳೆಗೆ ದಟ್ಟವಾಗಿ ಮೋಡ ಕವಿದಿದ್ದು ಮಳೆ ಸ್ವಲ್ಪ ಬಿರುಸು ಪಡೆದಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆಯಾಗಿದೆ.