ಮಡಿಕೇರಿ, ಜೂ. 30: ಕೊಡಗು ಜಿಲ್ಲೆಯ ಪ್ರವಾಸಿ ತಾಣ ದುಬಾರೆ ಹಾಗೂ ದಕ್ಷಿಣ ಕೊಡಗಿನ ಬರಪೊಳೆ ನದಿ ಪಾತ್ರದಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸಲು ಷರತ್ತು ಬದ್ಧವಾಗಿ ಅನುಮತಿ ಕಲ್ಪಿಸಲಾಗುವದು; ಎಂದು ಕೊಡಗು ರಿವರ್ ರ್ಯಾಫ್ಟಿಂಗ್ ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ರಿವರ್ ರ್ಯಾಫ್ಟಿಂಗ್ ಸಂಬಂಧ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಮೇಲಿನಂತೆ ಮಾಹಿತಿ ನೀಡಿದರು. ಈಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ನಿರ್ವಹಣಾ ಸಮಿತಿಯ ಸಭೆಯಲ್ಲಿ ರ್ಯಾಫ್ಟಿಂಗ್ ನಡೆಸಲು ಸಂಬಂಧಿಸಿದ ಅರಣ್ಯ ಇಲಾಖೆ ಹಾಗೂ ಪ್ರವಾ ಸೋದ್ಯಮ ಇಲಾಖೆಗೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ರ್ಯಾಫ್ಟಿಂಗ್ ನಡೆಸುವ ವರು ಪ್ರಮುಖವಾಗಿ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಅಗ್ನಿ ಶಾಮಕ ಇಲಾಖೆ, ಪ್ರವಾಸೋದ್ಯಮ ಮುಂತಾದ ಇಲಾಖೆಗಳನ್ನು ಒಳಗೊಂಡಂತೆ ತಾಂತ್ರಿಕ ವಿಭಾಗಗಳಿಂದ ನಿರಾಪೇಕ್ಷಣಾ ಪತ್ರ ಪಡೆದು ಕೊಳ್ಳಬೇಕಿದೆ. ಹೀಗೆ ಸಂಬಂಧಿಸಿದ ವ್ಯವಸ್ಥೆಯಡಿ ಸಮ್ಮತಿಸಿದ ಅರ್ಜಿಗಳನ್ನು ನಿರ್ವಹಣಾ ಸಮಿತಿ ಪರಿಶೀಲಿಸಿ; ಎಲ್ಲವೂ ಸೂಕ್ತವಿದ್ದರೆ ರ್ಯಾಫ್ಟಿಂಗ್‍ಗೆ ಸಮ್ಮತಿಸಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಲ್ಲದೆ, ಅಕ್ಷರ ಜ್ಞಾನವಿಲ್ಲದ ಕಾರ್ಮಿಕರನ್ನು ರ್ಯಾಫ್ಟಿಂಗ್ ನಡೆಸಲು ಬಳಸಿಕೊಳ್ಳದಿರುವದು ಸೇರಿದಂತೆ ಸಂಬಂಧಿ ಸಿದ ಮಾಲೀಕರಿಗೆ ಸ್ಪಷ್ಟ ಸೂಚನೆ ನೀಡಿರುವದಾಗಿ ನೆನಪಿಸಿದ ಅವರು; ಒಬ್ಬರಿಗೆ ಗರಿಷ್ಟ ಎರಡು ರ್ಯಾಫ್ಟಿಂಗ್ ಮಾತ್ರ ಬಳಕೆ ಮಾಡಲು ಷರತ್ತು ಹಾಕಿರುವದಾಗಿ ವಿವರಿಸಿದರು.
ಶುಲ್ಕ ನಿಗದಿ : ಪ್ರವಾಸೋದ್ಯಮ ಇಲಾಖೆಯ ಮುಖಾಂತರ ಈ ಸಂಬಂಧ ಅರ್ಜಿ ಆಹ್ವಾನಿಸಿ ರ್ಯಾಫ್ಟಿಂಗ್ ಶುಲ್ಕ ನಿಗದಿಪಡಿಸಲಾಗು ವದು; ರ್ಯಾಫ್ಟಿಂಗ್ ಮಾಲೀಕರು ಆ ಶುಲ್ಕವನ್ನು ಆಯಾ ತಿಂಗಳು ನಿರ್ವಹಣಾ ಸಮಿತಿಗೆ ಪಾವತಿಸಬೇಕು; ಹೆಚ್ಚು ಹೆಚ್ಚು ಪ್ರವಾಸಿಗಳು ಜಿಲ್ಲೆಗೆ ಆಗಮಿಸುವ ಸಮಯಕ್ಕೆ ಮಾಸಿಕ ಶುಲ್ಕ ರೂ. 5 ಸಾವಿರ ಹಾಗೂ ಇತರ ಸಂದರ್ಭ ರೂ. 2 ಸಾವಿರ ನಿಗದಿಗೊಳಿಸಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಅಂತರ ನಿಗದಿ : ರ್ಯಾಫ್ಟಿಂಗ್‍ನಲ್ಲಿ ಪ್ರವಾಸಿಗಳನ್ನು ಕರೆದೊಯ್ಯುವ ಸ್ಥಳ ಹಾಗೂ ಜಲ ವಿಹಾರ ಮುಕ್ತಾಯಗೊಳಿಸುವ ಕಡೆಗಳಲ್ಲಿ ಕಡ್ಡಾಯ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ವಹಿಸಲಾಗಿದೆ ಎಂದು ಸಮಜಾಯಿಷಿಕೆ ನೀಡಿದರು. ಮಾತ್ರವಲ್ಲದೆ 7 ಕಿ.ಮೀ. ದೂರ ಮಾತ್ರ ಗರಿಷ್ಠ ರ್ಯಾಫ್ಟಿಂಗ್‍ಗೆ ಅವಕಾಶ ಕಲ್ಪಿಸಲಾಗಿದೆ; ಇನ್ನು ಒಂದು ತಂಡವನ್ನು ವಿಹಾರಕ್ಕೆ ಕರೆದೊಯ್ಯಲು ರೂ. 600 ಮೊತ್ತ ಪಡೆಯುವಂತೆಯೂ ನಿರ್ವಹಣಾ ಸಮಿತಿ ನಿರ್ದೇಶನ ನೀಡಿದೆ. ಆ ಮೂಲಕ ಪ್ರವಾಸಿಗರ ಸುಲಿಗೆ ಮಾಡದಿರಲು ಮುನ್ನೆಚ್ಚರಿಸಲಾಗಿದೆ.
ಸಮಯ ನಿಗದಿ : ಬೆಳ್ಳಂಬೆಳ್ಳಿಗೆ ಅಥವಾ ಸಂಜೆಗತ್ತಲೆಯಲ್ಲಿ ಮತ್ತು ರಾತ್ರಿ ರ್ಯಾಫ್ಟಿಂಗ್‍ಗೆ ನಿರ್ಬಂಧ ವಿಧಿಸಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಮಾತ್ರ ನದಿ ಪಾತ್ರಗಳಲ್ಲಿ ಚಟುವಟಿಕೆ ನಡೆಸಲು ಮುಕ್ತ ಅವಕಾಶ ನೀಡಲಾಗಿದ್ದು, ಷರತ್ತುಗಳನ್ನು ಉಲ್ಲಂಘಿಸಿದರೆ, ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಪ್ರಸಕ್ತ ಬರಪೊಳೆಯಲ್ಲಿ ರ್ಯಾಫ್ಟಿಂಗ್‍ಗೆ ಮೂವರು ಅರ್ಜಿ ಸಲ್ಲಿಸಿದ್ದು, ದುಬಾರೆಯಿಂದ ಇನ್ನಷ್ಟೇ ಸಲ್ಲಿಕೆಯಾಗಬೇಕಿದೆ ಎಂದು ಮಾಹಿತಿ ನೀಡಿದ ಜಿಲ್ಲಾಧಿಕಾರಿ; ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ಆಶಯ ವ್ಯಕ್ತಪಡಿಸಿದರು.