ನಾಪೋಕ್ಲು, ಜೂ. 29: ಕೃಷಿ ಮನುಷ್ಯ ಜೀವನದ ಮೂಲಾಧಾರ. ರೈತರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿಂದ ತೊಡಗಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ವಲಯದ ಯೋಜನಾಧಿಕಾರಿ ಸದಾಶಿವಗೌಡ ಹೇಳಿದರು. ವೀರಾಜಪೇಟೆಯ ಹೆಗ್ಗಳ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ಸಾಂಬಾರ ಬೆಳೆಗಳು ಎಂಬ ವಿಷಯದ ಕುರಿತು ನಡೆದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಮೇಲ್ವಿಚಾರಕ ಕೆ.ಚೇತನ್ ಮಾತನಾಡಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಒಗ್ಗೂಡಿಸಿ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರ ಆಶಯದಂತೆ ಕೃಷಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಬೆಳೆಗಳ ವಿಷಯ ತಜ್ಞ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಪ್ರಭಾಕರ್ ಕೆ.ವಿ. ಸಾಂಬಾರ ಬೆಳೆಗಳಾದ ಕಾಳುಮೆಣಸು, ಶುಂಠಿ, ಅರಿಶಿಣ ಬೆಳೆಗಳ ಬಗ್ಗೆ ಬೆಳೆಯುವ ರೀತಿ ನಿರ್ವಹಣೆ ರೋಗಬಾಧೆ ಹಾಗೂ ಮಾರುಕಟ್ಟೆಗಳ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖಾ ಸಹಾಯಕ ಅಧಿಕಾರಿ ಸುನಂದ ಇಲಾಖಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ವಲಯದ ಮೇಲ್ವಿಚಾರಕರು ರೈತರು ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಸೇವಾ ಪ್ರತಿನಿಧಿ ಜ್ಯೋತಿ ವಂದಿಸಿದರು.