ಮಡಿಕೇರಿ, ಜೂ. 29 : ಅಲ್ಪಸಂಖ್ಯಾತರು ಯಾವದೇ ಕಾರಣಕ್ಕು ವಿಂಗಡಣೆಯಾಗದೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕೂಬ್ ಅವರು ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಗೆಲವಿಗೆ ಶೇ.98ರಷ್ಟು ಅಲ್ಪಸಂಖ್ಯಾತರ ಮತಗಳೇ ಕಾರಣವಾಗಿತ್ತು. ಕಾಂಗ್ರೆಸ್ ಸರಕಾರವಿದ್ದಾಗ ಅಲ್ಪಸಂಖ್ಯಾತರ ಏಳಿಗೆಗಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಹಲವರು ಪಕ್ಷದಿಂದ ಫಲವನ್ನು ಪಡೆದಿದ್ದಾರೆ, ಆದರೆ ಪಕ್ಷಕ್ಕೆ ಅವರ ಕೊಡುಗೆ ಕೇವಲ ಶೂನ್ಯ ಎಂದು ಯಾಕೂಬ್ ಬೇಸರ ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಕರ್ತರು ತಮ್ಮಲ್ಲಿರುವ ಗೊಂದಲಗಳನ್ನು ಪಕ್ಷದ ಸಭೆಯಲ್ಲಿ ಮುಕ್ತವಾಗಿ ಚರ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದರು.

ಅಲ್ಪಸಂಖ್ಯಾತರಿಗಾಗಿ ಸರಕಾರ ಜಾರಿಗೆ ತಂದಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಮಾತನಾಡಿ, ಪಕ್ಷದ ಬಲವರ್ಧನೆಗೆ ಪ್ರತಿಯೊಬ್ಬರು ಅಧ್ಯಕ್ಷರೊಂದಿಗೆ ನಿಕಟ ಸಂಪರ್ಕವನ್ನು ಹೊಂದಬೇಕು, ಆ ಮೂಲಕ ಪಕ್ಷದ ಗೆಲವಿಗೆ ಶ್ರಮಿಸಬೇಕು ಎಂದರು.

ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಎ.ಕೆ.ಹ್ಯಾರಿಸ್ ಮಾತನಾಡಿ, ಪಕ್ಷದ ಹಿರಿಯ ಮುಖಂಡರ ಸಲಹೆ ಸೂಚನೆಯಂತೆ ತಾನು ಪಕ್ಷದಲ್ಲಿ ಕಾರ್ಯನಿರ್ವಹಿಸಲಿದ್ದೇನೆ. ತನ್ನ ಬಾಲ್ಯವನ್ನು ಹೆಚ್ಚಾಗಿ ಗ್ರಾಮದಲ್ಲಿ ಕಳೆದಿರುವದರಿಂದ ಗ್ರಾಮಗಳ ಸಮಸ್ಯೆಗಳ ಬಗ್ಗೆ ಅರಿವಿದೆ. ಆ ನಿಟ್ಟಿನಲ್ಲಿ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಮನೆ ಮನೆಗಳಿಗೆ ತಲಪಿಸಿ ಪಕ್ಷದ ಗೆಲುವಿಗೆ ಶ್ರಮಿಸುವದಾಗಿ ತಿಳಿಸಿದರು.

ಅಲ್ಪಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳಿಗೆ ಇದೇ ಸಂದರ್ಭ ಅಧಿಕಾರ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹ್ಯಾರಿಸ್ ಎಡಪಾಲ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಮ್ಯಾಥ್ಯು, ಸೋಮವಾರಪೇಟೆ ಪ.ಪಂ. ಸದಸ್ಯ ಶೀಲಾ ಡಿಸೋಜ ಮತ್ತಿತರ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.