ಮಡಿಕೇರಿ, ಜೂ. 29: ದೇಶದ ರೈತರ ಖಾತೆಗೆ ಪ್ರಧಾನಮಂತ್ರಿ ‘ಕಿಸಾನ್ ಸಮ್ಮಾನ್’ ಯೋಜನೆಯಡಿ; ವಾರ್ಷಿಕ ಮೂರು ಕಂತುಗಳಲ್ಲಿ ತಲಾ ರೂ. 2 ಸಾವಿರದಂತೆ ಆರು ಸಾವಿರ ಮೊತ್ತವನ್ನು ಕಲ್ಪಿಸುವ ಸಂಬಂಧ ಈಗಾಗಲೇ ಜಿಲ್ಲೆಯ 20 ಸಾವಿರ ಮಂದಿ ರೈತರು ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆ ಮುಖಾಂತರ ಕೇಂದ್ರ ಸರಕಾರದ ಮಹತ್ವಪೂರ್ಣ ಯೋಜನೆಗೆ ರೈತರು ಫಲಾನುಭವಿಗಳಾಗಿ ಹೆಸರು ಸೇರ್ಪಡೆಗೊಳಿಸಿದ್ದಾರೆ.
ಈ ಅಭಿಯಾನದಡಿ ತಾ.25 ಕಡೆಯ ದಿನವಾಗಿತ್ತು. ಇದೀಗ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಕಾರಣ ಜುಲೈ 5ರ ತನಕ ರೈತರಿಗೆ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಇಂದಿಗೆ ಸರಿ ಸುಮಾರು 20 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.
ರೈತರು ತಮ್ಮ ಭೂ ದಾಖಲೆ (ಆರ್.ಟಿ.ಸಿ.) ಆಧಾರ್ ಕಾರ್ಡ್ ನಕಲು ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಒಳಗೊಂಡಂತೆ ಸ್ವಯಂಘೋಷಿತ ಅರ್ಜಿಯನ್ನು ಭರ್ತಿಗೊಳಿಸಿ ಸಂಬಂಧಪಟ್ಟವರಿಗೆ ಸಲ್ಲಿಸಬೇಕು. ಜಿಲ್ಲೆಯ ಎಲ್ಲಾ ಮೂರು ತಾಲೂಕು ಕಚೇರಿಗಳು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಅಥವಾ ಗ್ರಾಮ ಪಂಚಾಯಿತಿಗಳ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು.
ರೈತರು ಸ್ವಯಂ ಘೋಷಣೆಯೊಂದಿಗೆ ಸಲ್ಲಿಸುವ ಅರ್ಜಿ ಪ್ರಕಾರ, ಸರಕಾರಿ ನೌಕರರು, ಕೇಂದ್ರ ಅಥವಾ ರಾಜ್ಯ ಸರಕಾರಗಳಲ್ಲಿ ಯಾವದೇ ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ‘ಕಿಸಾನ್ ಸಮ್ಮಾನ್’ ಯೋಜನೆಯಡಿ ಅರ್ಜಿ ಸಲ್ಲಿಸುವಂತಿಲ್ಲ. ಕಿಸಾನ್ ಸಮ್ಮಾನ್ ಫಲಾನುಭವಿ ಆಗುವವರ ಕುಟುಂಬದ ಯಾವೊಬ್ಬ ಸದಸ್ಯ ಕೂಡ ಸರಕಾರಿ ಉದ್ಯೋಗ ಹಾಗೂ ನಿವೃತ್ತಿ ವೇತನ ಪಡೆಯುವ ಕುಟುಂಬಕ್ಕೆ ಸೇರಿರಬಾರದು.
ಅಷ್ಟು ಮಾತ್ರವಲ್ಲದೆ, ವಕೀಲ, ವೈದ್ಯ, ಲೆಕ್ಕಪರಿಶೋಧಕ, ವಾಸ್ತುಶಿಲ್ಪ ಮುಂತಾದ ವೃತ್ತಿಪರ ಕುಟುಂಬದವರು ಆಗಿರಬಾರದು. ಈ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡು ಅಂತಹ ಯಾವದೇ ಆರ್ಥಿಕ ಸ್ವಾವಲಂಬನೆಯ ಕುಟುಂಬಕ್ಕೆ ಸೇರದಿರುವ ರೈತರಿಗೆ ಈ ಸೌಲಭ್ಯ ದೊರಕಲಿದೆ. ಪ್ರಸಕ್ತ ಈ ಸ್ವಯಂ ಘೋಷಣಾ ಪತ್ರದೊಂದಿಗೆ ಇಂದಿಗೆ 20 ಸಾವಿರದಷ್ಟು ಅರ್ಜಿ ಸಲ್ಲಿಸಲ್ಪಟ್ಟಿವೆ.
ಈ ಅರ್ಜಿಗಳನ್ನು ಜುಲೈ 5ರ ತನಕ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಆ ನಂತರದಲ್ಲಿ ಜಿಲ್ಲೆಯ ಅರ್ಹ ರೈತರಿಂದ ಸಲ್ಲಿಸಲ್ಪಡುವ ಅರ್ಜಿಗಳು ಹಾಗೂ ಕಿಸಾನ್ ಸಮ್ಮಾನ್ ಫಲಾನುಭವಿಗಳ ವಿವರ ನಿಖರವಾಗಿ ಲಭಿಸಬೇಕಿದೆ.