ವರದಿ-ಚಂದ್ರಮೋಹನ್

ಕುಶಾಲನಗರ, ಜೂ. 29: ಕಳೆದ 7 ವರ್ಷಗಳ ಹಿಂದೆ ಪ್ರಾರಂಭಗೊಂಡ ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಯೋಜನೆ ಕಾಮಗಾರಿ ನೆನೆಗುದಿಗೆ ಬೀಳುವದರೊಂದಿಗೆ ಗ್ರಾಮೀಣ ಪ್ರದೇಶದ ಜನತೆ ಸಂಚಾರ ವ್ಯವಸ್ಥೆಗೆ ಪರದಾಡುವ ಸ್ಥಿತಿ ಮುಂದುವರೆದಿದೆ. ಸುಮಾರು 1 ಕೋಟಿ ರೂ.ಗಳಿಗೂ ಅಧಿಕ ಹಣ ವೆಚ್ಚ ಮಾಡಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಡೆದಿದ್ದರೂ ಹಲವು ಕಾರಣಗಳಿಂದ ನಾಗರಿಕರ ಸೇವೆಗೆ ಒದಗಿಸುವಲ್ಲಿ ಮಾತ್ರ ಸ್ಥಳೀಯ ಆಡಳಿತ ವಿಫಲವಾಗಿದೆ.

ಮುಖ್ಯಮಂತ್ರಿಗಳ ಅನುದಾನದಡಿಯಲ್ಲಿ 40 ಲಕ್ಷ ರೂ.ವೆಚ್ಚದಲ್ಲಿ ಕಳೆದ 7 ವರ್ಷಗಳ ಹಿಂದೆ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರೂ ಕಳಪೆ ಕಾಮಗಾರಿಯೊಂದಿಗೆ ನಿಧಾನಗತಿಯಲ್ಲಿ ಸಾಗಿದೆ.

2012 ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ನಂತರದ ದಿನಗಳಲ್ಲಿ ರಾಜ್ಯದಲ್ಲಿ ಹಲವು ಮುಖ್ಯಮಂತ್ರಿಗಳು ಬದಲಾವಣೆಯಾದರೂ ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಯೋಜನೆ ಮಾತ್ರ ಅಪೂರ್ಣಗೊಂಡು ಪ್ರಯಾಣಿಕರ ಸೇವೆಗೆ ಅಲಭ್ಯವಾಗಿದೆ.

ಕುಶಾಲನಗರದ ಸುತ್ತಮುತ್ತ ಗ್ರಾಮಗಳಿಗೆ ಹಾಗೂ ತಾಲೂಕು ಕೇಂದ್ರವಾದ ಸೋಮವಾರಪೇಟೆಗೆ ಮತ್ತು ಜಿಲ್ಲೆಯ ಸಿದ್ದಾಪುರ, ವೀರಾಜಪೇಟೆ, ಗೋಣಿಕೊಪ್ಪ ಭಾಗಗಳಿಗೆ ಈ ಮೂಲಕ ದಿನನಿತ್ಯ 75ಕ್ಕೂ ಅಧಿಕ ಖಾಸಗಿ ಬಸ್‍ಗಳು ತೆರಳುತ್ತಿವೆ. ಅಂದಾಜು 4 ಸಾವಿರಕ್ಕೂ ಅಧಿಕ ಪ್ರಯಾಣಿಕರು ಕುಶಾಲನಗರ ಸುತ್ತಮುತ್ತಲ ಗ್ರಾಮೀಣ ಜನತೆ ದಿನನಿತ್ಯ ಖಾಸಗಿ ಬಸ್‍ಗಳನ್ನು ಅವಲಂಭಿಸಬೇಕಾಗಿದೆ.

ಪ್ರಸಕ್ತ ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ ಖಾಸಗಿ ಬಸ್‍ಗಳು ಹೆದ್ದಾರಿ ರಸ್ತೆಯ ಅಂಚಿನಲ್ಲಿರುವ ಸರ್ಕಾರಿ ಬಸ್‍ನಿಲ್ದಾಣದ ಮುಂಭಾಗ ನಿಂತು ನಾಗರಿಕರಿಗೆ ಕಿರಿಕಿರಿ ಉಂಟುಮಾಡುತ್ತಿರುವದರೊಂದಿಗೆ ಈ ಪ್ರದೇಶ ಕಿಷ್ಕಿಂದೆಯಾಗಿ ಪರಿವರ್ತನೆಗೊಂಡಿದೆ.

ಪಟ್ಟಣದಲ್ಲಿ ಸರ್ಕಾರಿ ಬಸ್‍ನಿಲ್ದಾಣದ ಮುಂಭಾಗ ಎಲ್ಲೆಂದರಲ್ಲಿ ಬಸ್‍ಗಳು, ರಿಕ್ಷಾಗಳು, ಖಾಸಗಿ ವಾಹನಗಳು ನಿಲುಗಡೆಗೊಂಡು ಪಟ್ಟಣದ ಹೃದಯ ಭಾಗ ನಾಗರಿಕರಿಗೆ ಅಪಾಯಕಾರಿ ಪ್ರದೇಶವಾಗಿ ಮಾರ್ಪಟ್ಟಿದೆ.

ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಎಸ್‍ಎಫ್‍ಸಿ ಯೋಜನೆಯಡಿಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಎರಡನೇ ಹಂತದ 20 ಲಕ್ಷ ರೂ. ವೆಚ್ಚದ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡುವದರೊಂದಿಗೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಟ್ಟಡ ಪಾಳು ಕೊಂಪೆಯಂತೆ ಗೋಚರಿಸುತ್ತಿದೆ. ಶೌಚಾಲಯ ಕಟ್ಟಡಕ್ಕೆ ಅಳವಡಿಸಿದ ಟೈಲ್ಸ್‍ಗಳು ಸಂಪೂರ್ಣ ಕಿತ್ತುಹೋಗಿವೆ. ನಿರ್ಮಾಣಗೊಂಡ ಕಟ್ಟಡದ ರಕ್ಷಣೆಗೆ ಯಾವದೇ ಸಿಬ್ಬಂದಿಗಳನ್ನು ನೇಮಕ ಮಾಡದ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ರಾತ್ರಿ ಅನೈತಿಕ ವ್ಯವಹಾರಗಳು ನಡೆಯುತ್ತಿರುವದಾಗಿ ಸ್ಥಳೀಯರು ದೂರಿದ್ದಾರೆ.

ಜನಪ್ರತಿನಿಧಿಗಳ ದೂರದೃಷ್ಠಿಯ ಕೊರತೆ ಕೂಡ ಅಭಿವೃದ್ಧಿ ಕೆಲಸಗಳ ಕುಂಠಿತಕ್ಕೆ ಪ್ರಮುಖ ಕಾರಣ ಎನ್ನುವದು ನಾಗರಿಕರ ಆರೋಪವಾಗಿದೆ. ಶಾಸಕರು, ಜಿಲ್ಲಾಧಿಕಾರಿಗಳು ಹಲವು ಬಾರಿ ಭೇಟಿ ನೀಡಿದರೂ ನಿಲ್ದಾಣ ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿದೆ. ಕಟ್ಟಡ ಈಗಾಗಲೆ ಬಿರುಕು ಬಿಟ್ಟಿದ್ದು ಕಾಮಗಾರಿ ಬಹುತೇಕ ಕಳಪೆ ಎಂಬುದಕ್ಕೆ ಸಾಕ್ಷಿ ಎಂಬಂತಿದೆ. ತಾಲೂಕು ಕೇಂದ್ರವೊಂದರ ಖಾಸಗಿ ಬಸ್ ನಿಲ್ದಾಣವನ್ನು ಆದಷ್ಟು ಬೇಗನೇ ಲೋಕಾರ್ಪಣೆ ಮಾಡುವದರೊಂದಿಗೆ ಗ್ರಾಮೀಣ ಪ್ರದೇಶದ ಜನತೆಗೆ ಸೌಲಭ್ಯ ಕಲ್ಪಿಸಬೇಕೆನ್ನುವದು ಜನರ ಆಗ್ರಹವಾಗಿದೆ.

ತಕ್ಷಣ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಯೋಜನೆ ಪೂರ್ಣಗೊಳಿಸಿ ಕುಶಾಲನಗರ ಸುತ್ತಮುತ್ತ ಭಾಗದ ಗ್ರಾಮೀಣ ಜನತೆಯ ಸಂಪರ್ಕ ವ್ಯವಸ್ಥೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.