ಸೋಮವಾರಪೇಟೆ, ಜೂ.28: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಮೂಲಕ ನಿರ್ಮಾಣಗೊಂಡ ಕಾಂಕ್ರೀಟ್ ಕಾಮಗಾರಿ ಕಳಪೆಯಾದ ಹಿನ್ನೆಲೆ, ಗುತ್ತಿಗೆದಾರನೇ ಸ್ವತಃ ಖರ್ಚಿನಿಂದ ಮರು ಕಾಂಕ್ರೀಟೀಕರಣ ಮಾಡಿದ್ದಾರೆ.

ಸಮೀಪದ ಹಾನಗಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಬೀಡು ಕಾಲೋನಿ ರಸ್ತೆಯನ್ನು ಕಳೆದ ಕೆಲ ತಿಂಗಳುಗಳ ಹಿಂದೆ ಕಾಂಕ್ರೀಟೀಕರಣ ಮಾಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ರೂ. 5ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಮೂಲಕ 70 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು.

ಆದರೆ ರಸ್ತೆ ಕಾಮಗಾರಿ ಕಳಪೆಯಾದ ಹಿನ್ನೆಲೆ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ ಸಿಇಓ ಲಕ್ಷ್ಮೀಪ್ರಿಯಾ ಅವರು, ಕಳಪೆ ಕಾಮಗಾರಿಯನ್ನು ಅಗೆದು ತೆಗೆದು ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸುವಂತೆ ಅಭಿಯಂತರರಿಗೆ ಸೂಚಿಸಿದ್ದರು.

ಅದರಂತೆ ಇಂದು ಹಳೆಯ ಕಾಂಕ್ರೀಟ್ ರಸ್ತೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ನೂತನವಾಗಿ ರಸ್ತೆಯನ್ನು ನಿರ್ಮಿಸಲಾಯಿತು. ಅಭಿಯಂತರ ಭಾಸ್ಕರ್ ಸ್ಥಳದಲ್ಲಿದ್ದರು.