ಮಡಿಕೇರಿ, ಜೂ. 28: ಸ್ವಚ್ಛ ಭಾರತ್ ಮಿಷನ್ ಯೋಜನೆ ಯಡಿಯಲ್ಲಿ ಆಯೋಜಿಸಲಾದ ಸ್ವಚ್ಛತಾ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದನ್ನು ಪರಿಗಣಿಸಿ ಜಿಲ್ಲೆಯ ನಾಲ್ಕು ಗ್ರಾ.ಪಂ.ಗಳಿಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಗೌರವ ಪ್ರಶಸ್ತಿ ನೀಡಲಾಗಿದೆ.
ರಾಜ್ಯದಲ್ಲಿ ಕೊಡಗು ಸೇರಿದಂತೆ ತುಮಕೂರು ಹಾಗೂ ವಿಜಯಪುರದ ತಲಾ ನಾಲ್ಕು ಗ್ರಾ.ಪಂ.ಗಳು ಇದಕ್ಕೆ ಪರಿಗಣನೆಯಾಗಿದ್ದವು. ರಾಜ್ಯ ನೈರ್ಮಲ್ಯ ಸಂಸ್ಥೆ ನೀಡಿದ ವರದಿಯಂತೆ ಕೆಲಸ ಕಾರ್ಯಗಳನ್ನು ಪರಿಗಣಿಸಿ ಈ ಗ್ರಾ.ಪಂ.ಗಳು ಆಯ್ಕೆಯಾಗಿದ್ದವು.
ಜಿಲ್ಲೆಯಲ್ಲಿ ಕುಟ್ಟ ಪೊನ್ನಂಪೇಟೆ, ಹೆಬ್ಬಾಲೆ ಹಾಗೂ ಗುಡ್ಡೆಹೊಸೂರು ಗ್ರಾ.ಪಂ.ಗೆ ಈ ಗೌರವ ದೊರೆತಿದೆ. ತ್ಯಾಜ್ಯ ನಿರ್ವಹಣೆಯ ಸಾಧನೆಗಾಗಿ ಕುಟ್ಟ ಹಾಗೂ ಪೊನ್ನಂಪೇಟೆಯ ಗ್ರಾ.ಪಂ. ಅಧ್ಯಕ್ಷರುಗಳಾದ ವಿ.ಪಿ. ಲೀಲಾವತಿ ಹಾಗೂ ಎಂ.ಜಿ. ಸುಮಿತ ಅವರುಗಳು ಪ್ರತಿನಿಧಿಗಳಾಗಿ ಆಯ್ಕೆಗೊಂಡಿದ್ದರೆ ಹೆಚ್ಚು ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತಾ ಕಾರ್ಯಕ್ಕೆ ಹೆಬ್ಬಾಲೆ ಹಾಗೂ ಗುಡ್ಡೆಹೊಸೂರು ಗ್ರಾ.ಪಂ.ಗಳ ಸ್ವಚ್ಛಗ್ರಹಿಗಳಾದ ಹೆಚ್.ಎನ್. ಕುಮಾರ್ ಹಾಗೂ ಆರ್.ವಿಜಯ್ ಅವರನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿತ್ತು.
ತಾ. 24ರಂದು ಸ್ವಚ್ಛ ಭಾರತ್ ಮಿಷನ್‍ನಿಂದ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಇವರುಗಳನ್ನು ಗೌರವಿಸಲಾಗಿದೆ.