ಕೂಡಿಗೆ, ಜೂ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಗೋಣಿಮರೂರು ಜ್ಞಾನವಿಕಾಸ ಕೇಂದ್ರದಲ್ಲಿ ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುನಿತಾ ಅವರು ಚಾಲನೆ ನೀಡಿ ಮೂಢನಂಬಿಕೆಗಳ ಬಗ್ಗೆ ತಿಳಿಸಿದರು.
ನಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಮಗೆ ಮೊದಲು ನಂಬಿಕೆ ಇರಬೇಕು ಹಾಗಾದಲ್ಲಿ ಮಾತ್ರ ಒಳ್ಳೆ ಸಾಧನೆ ಮಾಡಲು ಸಾಧ್ಯ ಎಂದರು. ವಲಯದ ಮೇಲ್ವಿಚಾರಕ ಕೆ. ವಿನೋದ್ ಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳಾ ಜ್ಞಾನವಿಕಾಸ ಕೇಂದ್ರದ ಮೂಲಕ ಹಲವಾರು ಮಾಹಿತಿಗಳನ್ನು ನೀಡುತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿಯವರಾದ ಪದ್ಮ ಸ್ವಾಗತಿಸಿ, ಸೇವಾಪ್ರತಿನಿಧಿ ಸರೋಜ ವಂದಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.