ಮಡಿಕೇರಿ, ಜೂ. 28: ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸುವದು ಪೋಷಕರ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಪೋಷಕರು ವಿಶೇಷ ಕಾಳಜಿ ವಹಿಸುವಂತೆ ಉಪ ಪೊಲೀಸ್ ವರಿಷ್ಠಾಧಿಕಾರಿ ಎಸ್. ಸುಂದರರಾಜ್ ಸಲಹೆಯಿತ್ತರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ, ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆಗಳ ಸಹಯೋಗದಲ್ಲಿ ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ಮಕ್ಕಳ ಸುರಕ್ಷತೆ ಕುರಿತು ವಹಿಸಬೇಕಾದ ಕ್ರಮಗಳ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸುವ ಸಂದರ್ಭದಲ್ಲಿ ಒಂದು ವಾಹನದಲ್ಲಿ ಎಷ್ಟು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂಬದನ್ನು ಗಮನಿಸಬೇಕು.
ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ನಿಗಾವಹಿಸು ವಂತಾಗಬೇಕು.
ಶಾಲೆಗಳಲ್ಲಿ ಪೋಷಕರ ಸಭೆಯನ್ನು ಕಾಲ ಕಾಲಕ್ಕೆ ನಡೆಸಬೇಕು. ಮಕ್ಕಳನ್ನು ಶಾಲೆಗೆ ಸಿದ್ಧತೆ ಮಾಡಿ ಕಳುಹಿಸುವದರ ಜೊತೆಗೆ ಸುರಕ್ಷತೆಯಿಂದ ಕರೆದುಕೊಂಡು ಹೋಗುತ್ತಾರೆಯೇ ಎಂಬದನ್ನು ಪೋಷಕರು ಗಮನಿಸಬೇಕು.
ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಂದರರಾಜ್ ಹೇಳಿದರು.
ಅಗ್ನಿಶಾಮಕ ಇಲಾಖೆಯ ಅಧಿಕಾರಿ ಚಂದನ್ ಅವರು ವಾಹನಗಳಲ್ಲಿ ಬೆಂಕಿ ಅವಘಡಗಳನ್ನು ತಡೆಯುವದು, ವಾಹನ ಸುರಕ್ಷತೆ ಕಡೆ ಗಮನ ಹರಿಸುವದು ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ಪ್ರಾದೇಶಿಕ ಸಾರಿಗೆ ಕಚೇರಿಯ ವ್ಯವಸ್ಥಾಪಕ ಶಿವಣ್ಣ ಅವರು ಆಟೋ ರಿಕ್ಷಾಗಳಲ್ಲಿ 6 ವಿದ್ಯಾರ್ಥಿಗಳಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಂತಿಲ್ಲ. ಮೋಟಾರು ವಾಹನ ಕಾಯ್ದೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇಲ್ಲದಿದ್ದಲ್ಲಿ 2 ರಿಂದ 5 ಸಾವಿರವರೆಗೆ ದಂಡ, ಜೊತೆಗೆ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾವು ಕಳುಹಿಸುವ ವಾಹನದಲ್ಲಿ ವಾಹನ ಸುರಕ್ಷತೆ ಬಗ್ಗೆ ಹಾಗೂ ದಾಖಲೆಗಳು ಕ್ರಮಬದ್ಧವಾಗಿವೆಯೇ ಎಂಬದನ್ನು ಪೋಷಕರು ತಿಳಿದುಕೊಳ್ಳಬೇಕು ಎಂದು ಶಿವಣ್ಣ ಸಲಹೆ ಮಾಡಿದರು.
ಕಾನೂನು ಅರಿತು ನಡೆಯಬೇಕು ಮತ್ತು ಪಾಲಿಸಬೇಕು. ವಾಹನ ಚಾಲಕರಿಗೆ ಕನಿಷ್ಟ 5 ವರ್ಷ ವಾಹನ ಚಾಲನಾ ಅನುಭವವಿದೆಯೇ ಎಂಬದನ್ನು ಖಾತರಿ ಪಡಿಸಿ ಕೊಳ್ಳಬೇಕು. ವಾಹನ ಸುಸ್ಥಿತಿ ಯಲ್ಲಿದೆಯೇ ಎಂಬದನ್ನು ಗಮನಿಸಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ಪೋಷಕರು ಇತರರು ಇದ್ದರು.