ಮಡಿಕೇರಿ, ಜೂ.28 : ಆದರ್ಶ ಆಡಳಿತಗಾರ, ನಾಡಪ್ರಭು ಕೆಂಪೇಗೌಡ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಅವರು ಸ್ವಾರ್ಥ ಜೀವನವನ್ನು ಬಿಟ್ಟು ಸಮಾಜಮುಖಿಯಾಗಿ ಯೋಚಿಸಿದರ ಫಲವಾಗಿ ಬೆಂಗಳೂರು ಬೃಹತ್ತಾಗಿ ಬೆಳೆದಿದೆ. ಬೆಂಗಳೂರನ್ನು ಕಟ್ಟಿ ಬೆಳೆಸಿದ ಕೆಂಪೇಗೌಡ ಅವರು, ದೂರದೃಷ್ಟಿಯ ಅಗಾಧ ಚಿಂತನೆಯ ಫಲವಾಗಿ ಇಂದು ಉದ್ಯೋಗ, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಹೆಸರು ಮಾಡಿದೆ ಎಂದು ಅವರು ತಿಳಿಸಿದರು.
ಕೊಡಗು-ಹಾಸನ ಜಿಲ್ಲೆಗಳ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡ ಸೇರಿದಂತೆ ಬಸವೇಶ್ವರರು, ಕನಕದಾಸರು, ಪುರಂದರದಾಸರು, ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ ಹೀಗೆ ಹಲವು ದಾರ್ಶನಿಕರ ಆದರ್ಶಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಮತ್ತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ದೇಶ, ಭಾಷೆ, ಸಂಸ್ಕøತಿ, ಸಮಗ್ರತೆಯ ಅಭಿವೃದ್ಧಿಗಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ಸ್ಮರಿಸುವಂತಾಗಬೇಕು. ಆ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿ ಆದರ್ಶ ಆಡಳಿತಗಾರ ಎಂದು ಹೆಸರು ಪಡೆದರು ಎಂದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿಯವರು ನುಡಿದರು.
ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ, ಸಮಾಜವನ್ನು ಪ್ರೀತಿಸಬೇಕು. ಇತರರನ್ನು ಗೌರವಿಸಬೇಕು. ಇದರಿಂದ ಅಭಿವೃದ್ಧಿ ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್ ಅವರು ಮಾತನಾಡಿ ವಿಜಯನಗರ ಸಾಮ್ರಾಜ್ಯದಂತೆ ಬೆಂಗಳೂರು ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಕೆಂಪೇಗೌಡರು ಶ್ರಮಿಸಿದ್ದರು. ಭವಿಷ್ಯದಲ್ಲಿ ಬೆಂಗಳೂರು ಹೇಗಿರಬೇಕು ಎಂಬ ಬಗ್ಗೆ ಯೋಚಿಸಿದ್ದರು ಎಂದರು.
ಬೆಂಗಳೂರನ್ನು ಮಾದರಿ ನಗರವಾಗಿ ದೂರದೃಷ್ಟಿಯಿಂದ ನಿರ್ಮಿಸಿದ ಹಿರಿಮೆ ಕೆಂಪೇಗೌಡರದ್ದಾಗಿದೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗಾಗಿ ಹಲವು ಕೆರೆಗಳನ್ನು ನಿರ್ಮಿಸಿ ನೀರಾವರಿಗೂ ಸಹ ಹೆಚ್ಚಿನ ಒತ್ತು ನೀಡಿದ್ದರು. ಕೆಂಪೇಗೌಡರು ಕೃಷಿ ಮತ್ತು ವ್ಯಾಪಾರ ನಾಡಿನ ಪ್ರಮುಖ ಆದಾಯ ಮೂಲವೆಂದು ತಿಳಿದಿದ್ದರು ಎಂದು ಅವರು ಹೇಳಿದರು.
ಜಿ.ಪಂ.ಸದಸ್ಯರಾದ ದೀಪಕ್, ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶ್ರೀನಿವಾಸ್, ಪ್ರಮುಖರಾದ ಹೊಸೂರು ಸತೀಶ್ ಕುಮಾರ್ ಇತರರು ಇದ್ದರು.ಕುಶಾಲನಗರ ಒಕ್ಕಲಿಗ ಯುವ ವೇದಿಕೆಯ ಎಂ.ಡಿ.ಕೃಷ್ಣಪ್ಪ ಅವರು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭವನ ನಿರ್ಮಾಣಕ್ಕೆ ಜಾಗ ನೀಡುವಂತಾಗಬೇಕು. ನಗರದ ಯಾವುದಾದರೂ ವೃತ್ತಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿಡಬೇಕೆಂದು ಮನವಿ ಮಾಡಿದರು.
ರಾಮನಗರದ ಸಿದ್ದರಾಜು ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಅವರು ಸ್ವಾಗತಿಸಿದರು. ಎಚ್.ಜಿ.ಕುಮಾರ್ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.