ಕೂಡಿಗೆ, ಜೂ. 26: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೀಡಿದ ಪ್ರವಾಸ ಸಹಾಯದಲ್ಲಿ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಅಧ್ಯಯನ ಪ್ರವಾಸವನ್ನು ಕೈಗೊಂಡಿತು. ತೊರೆನೂರು, ಶಿರಂಗಾಲ, ಹೆಬ್ಬಾಲೆ ಈ ಮೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಆಡಳಿತದ ಮಂಡಳಿಯ ನೌಕರರು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದ ಸಹಕಾರಿ ಸಂಘಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದರು.

ಅಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿ ಹೊಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಅಧ್ಯಯನ ಪ್ರವಾಸ ಕೈಗೊಂಡ ಜಿಲ್ಲೆಯ ಮೂರು ಸಹಕಾರ ಸಂಘದವರು. ಗ್ರಾಮಾಂತರ ಪ್ರದೇಶದ ಒಂದು ಸಹಕಾರ ಸಂಘ ಯಾವ ರೀತಿಯ ಯೋಜನೆಗಳನ್ನು ಹಮ್ಮಿಕೊಂಡು ರೈತ ಸದಸ್ಯರು ಪ್ರಗತಿಯ ಜೊತೆಗೆ ಸಹಕಾರ ಸಂಘಗಳ ಅಭಿವೃದ್ಧಿ ಪಡೆಸುವ ಮಾಹಿತಿಯನ್ನು ಪಡೆದುಕೊಂಡರು.

ಈ ಸಹಕಾರ ಸಂಘ ಪ್ರಗತಿಯ ವೀಕ್ಷಣೆಯನ್ನು ಪಕ್ಕದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯದ ಸಹಕಾರಿ ಸಂಘಗಳು ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದಾರೆ. ಈ ಸಂದರ್ಭ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ, ಚಂದ್ರಶೇಖರ್, ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಪರಮೇಶ್, ಸೇರಿದಂತೆ ಸಂಘದ ಉಪಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು, ಕಚೇರಿಯ ಸಿಬ್ಬಂದಿ ವರ್ಗ ಹಾಜರಿದ್ದರು.