ಕೂಡಿಗೆ, ಜೂ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಗೊಂಡು ಎರಡು ವರ್ಷ ಕಳೆದರೂ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ ಎಂದು ಕೂಡಿಗೆ ವ್ಯಾಪ್ತಿಯ ಗ್ರಾಹಕರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ಪಡೆಯಲು ಕಾರ್ಡನ್ನು ವಿತರಿಸಲಾಗಿತ್ತು. ಆದರೆ ಸಮರ್ಪಕವಾಗಿ ನೀರು ದೊರಕದ ಕಾರಣ ಗ್ರಾಹಕರು ಕಾರ್ಡ್‍ನ ಹಣವನ್ನು ಹಿಂದಿರುಗಿಸಲು ಆಗ್ರಹಿಸಿದ್ದಾರೆ.

ಮಳೆಗಾಲ ಪ್ರಾರಂಭವಾದರೂ ಮಳೆಯಾಗದ ಕಾರಣ ನೀರಿನ ಸಮಸ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭ ಸೃಷ್ಟಿಯಾಗುತ್ತವೆ ಎಂದು ಈ ವ್ಯಾಪ್ತಿಯಲ್ಲಿ ಭಾಗಶಃ ಜನರು ಕುಡಿಯುವ ನೀರಿನ ಘಟಕದಿಂದ ಕಾರ್ಡನ್ನು 300 ರೂಪಾಯಿಗಳನ್ನು ಪಂಚಾಯಿತಿಗೆ ನೀಡಿ ಖರೀದಿಸಿದ್ದು, ಶುದ್ಧ ಕುಡಿಯುವ ನೀರು ಘಟಕದಿಂದ ನೀರು ದೊರಕದ ಕಾರಣ ಕಾರ್ಡ್‍ನ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ತಾಲೂಕು ಕುಡಿಯುವ ನೀರಿನ ಘಟಕ ಯೋಜನೆ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದು, ಇವರಿಂದ ಶುದ್ಧ ಕುಡಿಯುವ ನೀರಿನ ಘಟಕದ ಸರಿಯಾದ ನಿರ್ವಹಣೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದ್ದೂ ಇಲ್ಲದಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಕಾಯ್ದಿರಿಸಬೇಕಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ