ಸೋಮವಾರಪೇಟೆ, ಜೂ. 26: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಲೋಡರ್ಸ್ ಕಾಲೋನಿಯಲ್ಲಿ ಅಪೂರ್ಣ ಕಾಮಗಾರಿಯೊಂದು ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದೆ.

ಕಾಲೋನಿಗೆ ಕುಡಿಯುವ ನೀರಿನ ಸಂಪರ್ಕಕ್ಕಾಗಿ ನೂತನ ಪೈಪ್‍ಲೈನ್ ಅಳವಡಿಸಲಾಗಿದ್ದು, ಕಾಮಗಾರಿಯನ್ನು ಪೂರ್ಣ ಗೊಳಿಸದ ಹಿನ್ನೆಲೆ ನಿವಾಸಿಗಳು ರಸ್ತೆಯ ಮೇಲೆ ಸರ್ಕಸ್ ಮಾಡುವಂತಾಗಿದೆ.

ಮೊದಲೇ ಕಿಷ್ಕಿಂಧೆಯಂತಿರುವ ಲೋಡರ್ಸ್ ಕಾಲೋನಿಯಲ್ಲಿ ನಾಲ್ಕರಿಂದ ಐದು ಅಡಿಗಳಷ್ಟು ಮಾತ್ರ ರಸ್ತೆಯಿದ್ದು, ಕೂಲಿ ಕಾರ್ಮಿಕ ಕುಟುಂಬಗಳು ಕಾಲುದಾರಿಯ ಎರಡೂ ಬದಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿವೆ. ಇಕ್ಕಟ್ಟಿನ ಜಾಗದಲ್ಲಿ ಕಲ್ಲು ಚಪ್ಪಡಿಗಳನ್ನು ಅಳವಡಿಸಿ ಕೊಂಡು ಅದನ್ನೇ ರಸ್ತೆಯನ್ನಾಗಿ ಉಪಯೋಗಿಸಲಾಗುತ್ತಿದ್ದು, ಇದೀಗ ನೂತನ ಪೈಪ್‍ಲೈನ್ ಸಂಪರ್ಕಕ್ಕಾಗಿ ಚಪ್ಪಡಿಗಳನ್ನು ತೆಗೆದು ಪೈಪ್‍ಗಳನ್ನು ಅಳವಡಿಸಲಾಗಿದೆ. ಆದರೆ ತೆಗೆಯಲಾದ ಚಪ್ಪಡಿಗಳನ್ನು ಕೆಲವೆಡೆ ಹಾಗೆಯೇ ಬಿಡಲಾಗಿದ್ದರೆ, ಇನ್ನು ಕೆಲವೆಡೆ ಚಪ್ಪಡಿ ಕಲ್ಲುಗಳನ್ನು ನೆಲೆದ ಮೇಲೆ ಹಾಸಿ ಕಾಂಕ್ರೀಟ್ ಹಾಕುವದನ್ನು ಕೈಬಿಡಲಾಗಿದೆ. ಇದರಿಂದಾಗಿ ಕಾಲುದಾರಿಯಂತಿರುವ ರಸ್ತೆ ಕೆಸರುಮಯವಾಗಿದ್ದು, ಕಾಲೋನಿವಾಸಿಗಳು, ವೃದ್ಧರು, ವಿದ್ಯಾರ್ಥಿಗಳು ನಡೆದಾಡಲೂ ಪರದಾಡುವಂತಾಗಿದೆ.

ಸಣ್ಣಪುಟ್ಟ ಮಕ್ಕಳು ನಡೆದಾಡಲು ಅಸಾಧ್ಯವಾಗಿದ್ದು, ಕಲ್ಲುಗಳ ಮೇಲೆ ಬಿದ್ದು ಗಾಯಗಳಾಗುತ್ತಿವೆ. ಈ ಬಗ್ಗೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಮತ್ತು ಪಟ್ಟಣ ಪಂಚಾಯಿತಿಯ ಗಮನ ಸೆಳೆದ ಸಂದರ್ಭ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಪೈಪ್‍ಲೈನ್ ಅಳವಡಿಸಿ ಮಣ್ಣು ಮುಚ್ಚದೇ ಇರುವದರಿಂದ ನಡೆದಾಡಲೂ ಕಷ್ಟಕರವಾಗಿದೆ. ಈ ಬಗ್ಗೆ ಪಂಚಾಯಿತಿ ಮುಖ್ಯಾಧಿಕಾರಿಗಳು ತಕ್ಷಣ ಗಮನಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.