ಕುಶಾಲನಗರ, ಜೂ 25: ಜೈಲಿನಲ್ಲಿ ಶಿಕ್ಷೆಗೊಳಗಾಗಿರುವ ಖೈದಿಗಳ ಮನಪರಿವರ್ತನೆ ಮಾಡುವ ಹಿನ್ನೆಲೆ ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯದ ಎಲ್ಲಾ ಜೈಲುಗಳಲ್ಲಿ ಪುಸ್ತಕ ಕಮ್ಮಟ ಕಾರ್ಯಕ್ರಮ ಏರ್ಪಡಿಸುವ ಯೋಜನೆ ಹಮ್ಮಿಕೊಂಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದ್ದಾರೆ.
ಕರ್ನಾಟಕ ಜಾನಪದ ಪರಿಷತ್‍ನ ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡು ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಸಹಯೋಗದಲ್ಲಿ ನೆರೆಯ ಬದಿಯಡ್ಕದ ಗುರುಸದನದಲ್ಲಿ ನಡೆದ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಜಾನಪದ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹ ಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಂಬಂಧ ಪ್ರಾಧಿಕಾರದಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಕೋರಿದರು.
ಗಡಿನಾಡ ಕನ್ನಡ ಶಾಲೆಗಳಿಗೆ ರಾಜ್ಯದ ವಿವಿಧೆಡೆಗಳಿಂದ ಉಚಿತವಾಗಿ ಹಲವು ಕವಿಗಳು ನೀಡಿದ ರೂ. 16 ಲಕ್ಷಕ್ಕೂ ಅಧಿಕ ಮೌಲ್ಯದ ಪುಸ್ತಕಗಳನ್ನು 160 ಶಾಲೆಗಳಿಗೆ ವಿತರಿಸಲಾಯಿತು.
ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ, ವಿರೋಧ ಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪುಸ್ತಕ ವಿತರಣೆ ಮಾಡಿದರು. ಕಣಿವೆ ಸಾಹಿತಿ ಭಾರಧ್ವಾಜ್ ಸೇರಿದಂತೆ ಮಡಿಕೇರಿ ಮತ್ತಿತರ ಕಡೆಗಳಿಂದ ಸಾವಿರಾರು ಸಂಖ್ಯೆಯ ಪುಸ್ತಕಗಳನ್ನು ಗಡಿನಾಡ ಕನ್ನಡ ಶಾಲೆಗಳಿಗೆ ವಿತರಿಸಲು ದಾನವಾಗಿ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮತ್ತು ವಿವಿಧ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ ಪದಾಧಿಕಾರಿಗಳಾದ ವಿನೋದ್, ಕೆ.ಎಸ್. ಮೂರ್ತಿ, ಸುನೀಲ್ ಪಾಲ್ಗೊಂಡಿದ್ದರು.