ಮಡಿಕೇರಿ, ಜೂ. 25: ನಗರಕ್ಕೆ ಕುಡಿಯುವ ನೀರು ಪೂರೈಸುವ ಕುಂಡಾಮೇಸ್ತ್ರೀ ನೀರಿನ ಯೋಜನೆಗೆ ಹಾಗೂ ಕೂಟುಹೊಳೆ ನೀರಿಗೆ ಕಟ್ಟಿರುವ ಅಣೆಕಟ್ಟು ಹಾಗೂ ನೀರು ಸರಬರಾಜು ಬಾವಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಆರೋಪಿಸಿದ್ದಾರೆ. ನಗರಕ್ಕೆ ನೀರು ಸರಬರಾಜು ಮಾಡಲು ಕುಂಡಾಮೇಸ್ತ್ರೀ ಯೋಜನೆಯಡಿ ಕಟ್ಟಲಾದ ಬಾವಿಗೆ ರಂಧ್ರಗಳನ್ನು ಮಾಡಿ ಕೂಟುಹೊಳೆಯ ನೀರು ಕೂಡ ಶೇಖರಣೆಗೊಳ್ಳುವಂತೆ ಮಾಡಬೇಕಾಗಿದೆ. ಆದರೆ ಬಾವಿಯು ಹೊಳೆಗಿಂತ ಎತ್ತರದಲ್ಲಿದ್ದು ಅವೈಜ್ಞಾನಿಕವಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೇಳಿದರು.
ಕೂಟುಹೊಳೆಗೆ ಅಡ್ಡಲಾಗಿ ಕಟ್ಟಲಾದ ಅಣೆಕಟ್ಟಿನ ಹಲಗೆಗಳನ್ನು ವರ್ಷಂಪ್ರತಿ ಜೂನ್ ಆರಂಭದೊಂದಿಗೆ ತೆಗೆದು ಅಕ್ಟೋಬರ್ ತಿಂಗಳಲ್ಲಿ ಮುಚ್ಚಲಾಗುತ್ತಿತ್ತು. ಇದರಿಂದ ಮಳೆಯಲ್ಲಿ ಅಧಿಕ ನೀರು ಸರಾಗವಾಗಿ ಹರಿಯಲು ಅನುಕೂಲವಾಗುತ್ತಿತ್ತು. ಆದರೆ, ಈ ವರ್ಷ ಯಾವದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದರಿಂದ ಮಳೆಗಾಲದಲ್ಲಿ ಅಣೆಕಟ್ಟಿನ ಸುತ್ತಲಿನ ವಾಸಿಗರಿಗೆ ತೊಂದರೆ ಉಂಟಾಗುತ್ತದೆ ಅಣೆಕಟ್ಟೆಗೆ ಹಾಕಲಾದ ಮರದ ಹಲಗೆಗಳನ್ನು ತೆರವುಗೊಳಿಸಬೇಕೆಂದು ಗಣೇಶ್ ಒತ್ತಾಯಿಸಿದ್ದಾರೆ. ಈ ಸಂದರ್ಭ ನಗರ ಸಭೆಯ ಸದಸ್ಯೆ ಲೀಲಾ ಶೇಷಮ್ಮ, ಪ್ರಮುಖರಾದ ಅಬ್ದುಲ್ಲಾ, ಸುನಿಲ್ ಇದ್ದರು.