ಮಡಿಕೇರಿ ಜೂ. 25: ಸಂಘಟನೆ ಗಳು ಪ್ರಬಲವಾಗಿ ಬೇರೂರಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರÀ ಸಂಘದ ಮುಖಂಡ ಟಿ.ಪಿ. ರಮೇಶ್ ಹೇಳಿದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ 19ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ರಾಷ್ಟ್ರದಲ್ಲಿ 14 ಲಕ್ಷ ಅಂಗನವಾಡಿ ಕೇಂದ್ರಗಳಿದ್ದು, 26 ಲಕ್ಷ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ದೇಶದ 10 ಕೋಟಿ ಮಕ್ಕಳ ಪಾಲನೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕಾಂಶ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಸರಕಾರ ರಾಜ್ಯದಲ್ಲಿ ಈ ವರ್ಷ 276 ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದ್ದು, ಅಂಗನವಾಡಿ ಕೇಂದ್ರದಲ್ಲಿರುವ 3 ರಿಂದ 6 ವರ್ಷದ ಮಕ್ಕಳು ಇಲ್ಲಿಗೆ ಸೇರ್ಪಡೆಗೊಳ್ಳುವ ಎಲ್ಲಾ ಸಾಧ್ಯತೆಗಳಿದೆ.
ಈ ಕಾರಣದಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಲ್ಲದೆ ರಾಜ್ಯದ 62,580 ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುವದರಿಂದ ಸಮಸ್ಯೆಯನ್ನು ಬಗೆಹರಿಸಲು ಶಿಕ್ಷಣ ಪರಿಣಿತರ ಸಬಲೀಕರಣ ಸಮಿತಿ ಅಧ್ಯಯನ ನಡೆಸಿ 2017ರಲ್ಲಿ ಸರಕಾರಕ್ಕೆ ನೀಡಿರುವ ವರದಿಯಂತೆ ಕಾರ್ಯಕ್ರಮ ರೂಪಿಸಬೇಕೆಂದು ರಮೇಶ್ ಒತ್ತಾಯಿಸಿದರು. ಟಿ.ಯು.ಸಿ.ಸಿ.ಯ ನಾಯಕಿ ಕೆ.ಕೆ. ಶಾರದ ಹಾಗೂ ಜಿಲ್ಲಾ ಸಂಘದ ಅಧ್ಯಕ್ಷೆ ಎ.ಜಿ. ತಾರಮಣಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ತಾಲೂಕು ಅಧ್ಯಕ್ಷೆ ವಿ.ಹೆಚ್. ನಾಗರತ್ನ ವಹಿಸಿದ್ದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಮೃತಪಟ್ಟ ಇಬ್ಬರು ಸಹಾಯಕಿಯರ ಕುಟುಂಬದವರಿಗೆ ಆರ್ಥಿಕ ನೆರವು ವಿತರಿಸಲಾಯಿತು.
ತಾಲೂಕು ಪ್ರಧಾನ ಕಾರ್ಯದರ್ಶಿ ಪವಿತ್ರ ಸರ್ವರನ್ನು ಸ್ವಾಗತಿಸಿ, ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಲೆಕ್ಕಪತ್ರವನ್ನು ಆಶಾ, ಕ್ಷೇಮನಿಧಿ ವರದಿಯನ್ನು ಕ್ಷೇಮನಿಧಿ ಅಧ್ಯಕ್ಷೆ ಸುಜಾತ ಹಾಗೂ ಕ್ಷೇಮನಿಧಿಯ ಲೆಕ್ಕಪತ್ರವನ್ನು ದೇವಮ್ಮ ಜಿ. ಮಂಡಿಸಿದರು.
ಉಷಾ ಪ್ರಾರ್ಥಿಸಿ, ಮಾಲತಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಕುಸುಮ ವಂದಿಸಿದರು.