ಮಡಿಕೇರಿ, ಜೂ. 25 :ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಡೆದ ಯುಜಿಡಿ ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಗರಸಭಾ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಇಲ್ಲಿಯವರೆಗೆ ಅಗತ್ಯ ಕ್ರಮಕೈಗೊಂಡಿಲ್ಲವೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
ಮುಂದಿನ 15 ದಿನಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್. ಅಬೂಬಕ್ಕರ್, ಯುಜಿಡಿ ಕಾಮಗಾರಿಯಿಂದ ರಸ್ತೆಗಳು ಹದಗೆಟ್ಟು ಮಳೆಗಾಲದಲ್ಲಿ ಸಂಚಾರ ಕಷ್ಟಸಾಧ್ಯವಾಗಿದೆ, ನಗರದ ಗಣಪತಿ ಬೀದಿ, ರಾಣಿಪೇಟೆ, ಮಲ್ಲಿಕಾರ್ಜುನ ನಗರಕ್ಕೆ ತೆರಳುವ ರಸ್ತೆಗಳು ನಡೆದಾಡಲು ಸಹ ಅಯೋಗ್ಯವಾಗಿ ಪರಿಣಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹದೇವಪೇಟೆ ರಸ್ತೆಯ ಕಾಂಕ್ರಿಟೀಕರಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ನಗರಸಭಾ ಸಾಮಾನ್ಯ ಸಭೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ. ಆದರೆ, ಇಲ್ಲಿಯವರೆಗೆ ಪೌರಾಯುಕ್ತರಾಗಲಿ, ಜಿಲ್ಲಾಡಳಿತವಾಗಲಿ ಅಗತ್ಯ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಮಹದೇವಪೇಟೆ ರಸ್ತೆಯ ಕಾಂಕ್ರಿಟೀಕರಣದ ಬಳಿಕ ಮೂರುವರೆ ವರ್ಷ ಕಳೆದಿದ್ದರು ರಸ್ತೆ ಬದಿಗೆ ಇಂಟರ್‍ಲಾಕ್ ಅಳವಡಿಸುವ ಕಾರ್ಯವಾಗಲಿ, ಚರಂಡಿ ಕಾಮಗಾರಿಗಳನ್ನಾಗಲಿ ಇಲ್ಲಿಯವರೆಗೆ ನಡೆಸಿಲ್ಲ. ಇದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ಬಗ್ಗೆ ಪೌರಾಯುಕ್ತರು ಗಮನ ಹರಿಸಿ ಅಗತ್ಯ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಎಸ್‍ಡಿಪಿಐ ನಗರಾಧ್ಯಕ್ಷ ಮನ್ಸೂರ್ ಆಲಿ ಮಾತನಾಡಿ, ಕಳೆದ ಸಾಲಿನ ಪ್ರಾಕೃತಿಕ ವಿಕೋಪದಿಂದ ಮಡಿಕೆÉೀರಿ ನಗರ ವ್ಯಾಪ್ತಿಯ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ತೊಂದರೆಗೆ ಒಳಗಾದ ಹಾಗೂ 94ಸಿ ಮತ್ತು 94ಸಿಸಿಯಡಿ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವವರಿಗೆ ಇಲ್ಲಿಯವರೆಗೆ ನೆರವು ದೊರಕಿಲ್ಲ. ಈ ಬಗ್ಗೆ ಆಡಳಿತ ವ್ಯವಸ್ಥೆ ಗಮನ ಹರಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಕೆ.ಜಿ.ಪೀಟರ್ ಹಾಗೂ ಕಾರ್ಯದರ್ಶಿ ಅಹಮ್ಮದ್ ಕಬೀರ್ ಉಪಸ್ಥಿತರಿದ್ದರು.