ಮಡಿಕೇರಿ, ಜೂ. 22: ಕೊಡಗಿನಿಂದ ಬೆಲೆಬಾಳುವ ಮರಗಳನ್ನು ಕಾನೂನು ಬಾಹಿರವಾಗಿ ಕಡಿದು ಅಕ್ರಮ ಸಾಗಾಟದೊಂದಿಗೆ; ನೆರೆಯ ಕೇರಳ, ಮೈಸೂರು ಹಾಗೂ ಇತರೆಡೆಗಳಲ್ಲಿ ಮಾರಾಟ ದಂಧೆಗೆ ಸಂಬಂಧಿಸಿದಂತೆ ಈಗಾಗಲೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಕೆ. ನೋಬನ್ ಎಂಬಾತನಿಂದ ಭಾರೀ ಮೌಲ್ಯದ ಅಕ್ರಮ ಮರಗಳನ್ನು ವಶಪಡಿಸಿಕೊಂಡಿರುವ ಬೆನ್ನಲ್ಲೇ; ಇದೀಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆಗೆ ಮುಂದಾಗಿರುವ ಕುರಿತು ತಿಳಿದುಬಂದಿದೆ.ಅಲ್ಲದೆ ಭಾರೀ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೋಬನ್ ಹಾಗೂ ಇತರ ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಬೆನ್ನಲ್ಲೇ ಮೊನ್ನೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರಿಂದ ತರಾಟೆಗೆ ಒಳಗಾಗಿರುವ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆ ಬೆನ್ನಲ್ಲೇ ಅರಣ್ಯ ವಲಯಾಧಿಕಾರಿ ಗಂಗಾಧರ್ ನೇತೃತ್ವದಲ್ಲಿ ನೋಬನ್‍ಗೆ ಸೇರಿದ ಕೆ. ಬಾಡಗದ ಪಲ್ಲೇರಿ ನಿವಾಸದ ಮೇಲೆ ಧಾಳಿ ನಡೆಸಲಾಗಿದೆ.ಪಲ್ಲೇರಿ ನಿವಾಸದೊಳಗೆ ಅಕ್ರಮ ದಾಸ್ತಾನು ಇರಿಸಲಾಗಿದ್ದ ಬೆಲೆಬಾಳುವ 45 ಬೀಟೆ ಮರದ ನಾಟಾಗಳ ಪರಿವರ್ತಿಸಿದ ದಾಸ್ತಾನು ಈ ವೇಳೆ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ.

ಹೆಬ್ಬಲಸು ದಾಸ್ತಾನು : ಇನ್ನೊಂದೆಡೆ ಹೆಬ್ಬಲಸು ನಾಟಾಗಳನ್ನು ಪರಿವರ್ತಿಸಿ ದಾಸ್ತಾನು ಇರಿಸಿದ್ದು ಗೋಚರಿಸಿದ್ದು, 83 ತುಂಡುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ. ಅಲ್ಲದೆ, ಮರಕಡಿತಲೆಗೆ ಬಳಸುವ ಯಂತ್ರೋಪಕರಣ ಸಹಿತ ಪತ್ತೆಯಾಗಿರುವ ಮರಗಳನ್ನು ಪೊನ್ನಂಪೇಟೆ ಇಲಾಖಾ ಗೋದಾಮುವಿಗೆ ಸಾಗಿಸಲಾಗಿದೆ.

ಪ್ರಕರಣ ದಾಖಲು : ಆರೋಪಿ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963ರ ಅಡಿಯಲ್ಲಿ ಸೆ.62, 714, 80, 104ಎ ಮತ್ತು ಅರಣ್ಯ ನಿಯಮ1969ರ 127ಎ, 130, 144 ಆರ್/ಡಬ್ಲ್ಯು 165ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಅಲ್ಲದೆ ಈಗಾಗಲೇ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 66/2019ರ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.