ವೀರಾಜಪೇಟೆ, ಜೂ. 23: ಜಿಲ್ಲೆಯ ಬಹುತೇಕ ಮಕ್ಕಳಲ್ಲಿ ಇಂಗ್ಲಿಷ್ ಭಾಷಾ ಸ್ಪಷ್ಟತೆ ಹಾಗೂ ಉಚ್ಛರಣೆಯ ಸಮಸ್ಯೆ ಎದ್ದು ಕಾಣುತ್ತಿದ್ದು ಉದ್ಯೋಗ ಲಭಿಸುವ ಉತ್ತಮ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ನಿವೃತ ಕರ್ನಲ್ ನಾಯಡ ಚಿಣ್ಣಪ್ಪ ವಿಷಾದಿಸಿದರು.
ಕೊಡಗು ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ ವತಿಯಿಂದ ತ್ರಿವೇಣಿ ಶಾಲಾ ಆವರಣದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿ ರುವ ಆರ್ಥಿಕವಾಗಿ ಹಿಂದುಳಿದ, ನಿರ್ಗತಿಕ, ಪ್ರಕೃತಿ ವಿಕೋಪದಲ್ಲಿ ಸಿಲುಕಿ ಎಲ್ಲವನ್ನು ಕಳೆದುಕೊಂಡ ವಿದ್ಯಾರ್ಥಿಗಳ ಶಾಲಾ ಶುಲ್ಕ ವಿತರಣಾ ಸಮಾರಂಭದಲ್ಲಿ ಮಾತನಾಡಿ ಕೇವಲ ಓದಿದರೆ ಸಾಲದು, ಓದಿನ ಜೊತೆ ಯಲ್ಲಿ ಎಲ್ಲರೊಂದಿಗೆ ಬೆರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿರುವ ದೊಡ್ಡ ದೊಡ್ಡ ಕಂಪನಿಗಳಲ್ಲಿ ನಡೆಸುವ ಸಂದರ್ಶನ ವನ್ನು ಯಾವ ರೀತಿ ಎದುರಿಸಬೇಕು ಎಂಬದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಖಜಾಂಜಿ ಕರ್ನಲ್ ಪಟ್ಟಡ ಕಾರ್ಯಪ್ಪ ಮಾತನಾಡಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ನಾವು ಏನು ಕಲಿಸುತ್ತೇವೆ ಅದು ಅವರ ಜೀವನ ಪರ್ಯಂತ ಇರುತ್ತದೆ. ಪೋಷಕರು ಮಕ್ಕಳ ಮುಂದೆ ಯಾವ ರೀತಿ ವರ್ತಿಸುತ್ತಾರೆ ಆ ರೀತಿಯಾಗಿ ಮಕ್ಕಳು ಬೆಳೆಯುತ್ತಾರೆ. ತಂದೆ ತಾಯಂದಿರು ಮಕ್ಕಳಿಗೆ ಮಾರ್ಗದರ್ಶಿಗಳಾಗಿರಬೇಕು. ಮನುಷ್ಯರಿಗೆ ಸಿಟ್ಟು ಬರುವದು ಸಾಮಾನ್ಯ. ಆ ಕೋಪವನ್ನು ಒಳ್ಳೆಯ ರೀತಿಯಲ್ಲಿ ಬಗೆ ಹರಿಸಿಕೊಳ್ಳಬೇಕು. ಕಳೆದ ಬಾರಿ ಪ್ರಕೃತಿ ವಿಕೋಪದಲ್ಲಿ ಸಿಲುಕಿದ 127 ವಿದ್ಯಾರ್ಥಿಗಳನ್ನು ಪೊನ್ನಂಪೇಟೆಯ ಸಾಯಿಶಂಕರ್ ಶಾಲೆಯಲ್ಲಿ ಆಶ್ರಯ ನೀಡಿ ನಮ್ಮ ಸಂಸ್ಥೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆರ್ಥಿಕ ನೆರವನ್ನು ನೀಡಲಾಗಿದೆ. ಆ ವಿದ್ಯಾರ್ಥಿಗಳ ಮೂರು ವರ್ಷದ ಶಾಲಾ ಶುಲ್ಕ ಸೇರಿದಂತೆ ಇನ್ನಿತರ ಎಲ್ಲಾ ವ್ಯವಸ್ಥೆಗಳನ್ನು ನಮ್ಮ ಸಂಸ್ಥೆಯೇ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಮಂದಪಂಡ ಸದಾ ಚಿಣ್ಣಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮೇಜರ್ ಜನರಲ್ ಕೊಡಂದೇರ ಅರ್ಜುನ್ ಮುತ್ತಣ್ಣ, ತ್ರಿವೇಣಿ ಶಾಲೆಯ ಅಧ್ಯಕ್ಷ ಆಪಾಡಂಡ ಕಾರ್ಯಪ್ಪ, ಟ್ರಸ್ಟಿಗಳಾದ ಪಂದ್ಯಂಡ ಸೂರಜ್ ಮಾಚಯ್ಯ, ಬೊಪ್ಪಂಡ ಸುಬ್ರಮಣಿ, ಮಾಚಂಡ ಗಣೇಶ್ ಪೊನ್ನಪ್ಪ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 79 ವಿದ್ಯಾರ್ಥಿಗಳಿಗೆ 11.23 ಲಕ್ಷ ಶಾಲಾ ಶುಲ್ಕವನ್ನು ವಿತರಿಸಲಾಯಿತು. ಮಾರ್ಚಂಡ ಗಣೇಶ್ ಪೊನ್ನಪ್ಪ ಸ್ವಾಗತಿಸಿ ವಂದಿಸಿದರು.