ವೀರಾಜಪೇಟೆ, ಜೂ. 23: ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕುಡಿಯುವ ನೀರಿನ ಅಭಾವ ಇರುವದರಿಂದ ಜನರಿಗೆ ಅನುಕೂಲ ಆಗುವ ಸ್ಥಳದಲ್ಲಿ ನೀರಿನ ಸೌಲಭ್ಯ ನೀಡಲಾಗುವದು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲಗೇರಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ರೂ. 5 ಲಕ್ಷ ಅನುದಾನದಲ್ಲಿ ಬೋರ್‍ವೆಲ್ ಅಳವಡಿಸಿ ನೀರಿನ ಟ್ಯಾಂಕ್ ಉದ್ಘಾಟಿಸಿ ಮಾತನಾಡಿ ಈ ಗ್ರಾಮಕ್ಕೆ ಜನರ ಬೇಡಿಕೆಯಂತೆ ನೀರಿನ ಸೌಲಭ್ಯ ಒದಗಿಸಲಾಗಿದೆ. ಕುಂಜಿಲಗೇರಿ ಗ್ರಾಮದ ರಸ್ತೆ ತೀರ ಹದಗೆಟ್ಟಿರುವುದರಿಂದ ರೂ,5 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗುವದು ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ಕಾಕೋಟುಪರಂಬು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ಈ ಗ್ರಾಮದಲ್ಲಿ ಕೆಲವು ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಈಗಾಗಲೆ ಬೋರ್‍ವೆಲ್ ಮೂಲಕ ನೀರನ್ನು ಒದಗಿಸಲಾಗಿದೆ. ಚುನಾವಣಾ ಸಂದರ್ಭ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಗೊಳಿಸಲಾಗುವದು. ಕಾಮಗಾರಿ ನಡೆಯುವ ಸಂದರ್ಭ ಗ್ರಾಮಸ್ಥರು ಕಾಮಗಾರಿ ಕಳಪೆಯಾಗದಂತೆ ಎಚ್ಚರವಹಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಕೆ.ಪೊನ್ನಣ್ಣ ಗ್ರಾಮಸ್ಥರಾದ ಕೆ.ಸಿ.ಮಂದಣ್ಣ, ಕೆ.ಸಿ.ಪೂವಯ್ಯ, ಕೆ.ಎಂ.ಬೋಪಯ್ಯ, ಚರ್ಮಂಡ ಪೂವಯ್ಯ, ಕೂತಂಡ ಸುರೇಶ್ ಅಪ್ಪಯ್ಯ ಮತ್ತಿತರರು ಹಾಜರಿದ್ದರು.