ಶನಿವಾರಸಂತೆ, ಜೂ. 22: ಗತಿಸಿದ ರಾಜಮಹಾರಾಜರ, ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಆಚರಿಸುವ ಸರ್ಕಾರ ವೀರಶೈವ ಲಿಂಗಾಯಿತ ಅರಸ ಚಿಕ್ಕವೀರರಾಜೇಂದ್ರ ಒಡೆಯರ ಪರವಾಗಿ ಬ್ರಿಟೀಷರ ವಿರುದ್ಧ ಹೋರಾಡಿ ನೇಣುಗಂಬಕ್ಕೇರಿ ಹುತಾತ್ಮರಾದ ವೀರಸೇನಾನಿ ಶನಿವಾರಸಂತೆ ಹೋಬಳಿಯ ಹೆಮ್ಮನೆ ಗ್ರಾಮದ ಜಂಗಪುರ ಪುಟ್ಟಬಸಪ್ಪ (ಕಲ್ಯಾಣಸ್ವಾಮಿ) ಅವರನ್ನು ಇದುವರೆಗೂ ಸ್ಮರಿಸಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಮಡಿಕೇರಿಯ ನ್ಯಾಯವಾದಿ ಕೆ.ಆರ್. ವಿದ್ಯಾಧರ್ ವಿಷಾದ ವ್ಯಕ್ತಪಡಿಸಿದರು.

ಸಮೀಪದ ಗುಡುಗಳಲೆ ಜಾತ್ರಾ ಮೈದಾನದ ಬಸವೇಶ್ವರ ದೇವಾಲಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬಸವ ಜಯಂತಿ ಮತ್ತು ಕೊಡಗನ್ನಾಳಿದ ವೀರಶೈವ ಲಿಂಗಾಯಿತ ಅರಸ ಚಿಕ್ಕವೀರರಾಜೇಂದ್ರ ಒಡೆಯರ ಪರವಾಗಿ ಬ್ರಿಟೀಷರ ವಿರುದ್ಧ ಹೋರಾಡಿ ನೇಣುಗಂಬಕ್ಕೇರಿ ಹುತಾತ್ಮರಾದ ವೀರಸೇನಾನಿ ಹೆಮ್ಮನೆ ಗ್ರಾಮದ ಜಂಗಪುರ ಪುಟ್ಟಬಸಪ್ಪ (ಕಲ್ಯಾಣಸ್ವಾಮಿ) ಸಂಸ್ಮರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡ ಅವರನ್ನು ಸ್ಮರಣೆ ಮಾಡುವವರು ಕಲ್ಯಾಣಸ್ವಾಮಿಯವರನ್ನೂ ಸ್ಮರಿಸಿಕೊಳ್ಳಬೇಕು. ಕೊಡಗು ಹಾಗೂ ಕೆನರಾ ಜಿಲ್ಲೆಗಳಲ್ಲಿ ನಡೆದ ಬ್ರಿಟಿಷ್ ವಿರೋಧಿ ಹೋರಾಟ, ಅಮರಸುಳ್ಯ ಬಂಡಾಯ ಅಥವಾ ‘ಕಲ್ಯಾಣಪ್ಪನ ಕಾಟುಕಾಯಿ’ ಎಂದು ಪ್ರಸಿದ್ಧಿಯಾಗಿದೆ. ಕೊಡಗಿನ ಬಿಡುಗಡೆಗಾಗಿ ಹೋರಾಟ ಮಾಡಿದ ಕಲ್ಯಾಣಸ್ವಾಮಿಯ ನಿಜವಾದ ಹೆಸರು ಪುಟ್ಟಬಸಪ್ಪ ಶಿವಾಚಾರ ಜಂಗಮ ಬಸವಲಿಂಗಯ್ಯನವರ ಮಗ ಪುಟ್ಟಬಸಪ್ಪನನ್ನು ಇತಿಹಾಸ ಮರೆತುಬಿಟ್ಟಿದೆ. 1837ರಲ್ಲಿ ಮಂಗಳೂರಿನಲ್ಲಿ ಕೊಡಗು - ಕೆನರಾ ಬಂಡುಕೋರರ ವಿಚಾರಣೆಗೆಂದು ನಿಯಮಿಸಲಾದ ವಿಶೇಷ ನ್ಯಾಯಾಲಯದ ಮುಂದೆ ಪುಟ್ಟಬಸಪ್ಪರನ್ನು ವಿಚಾರಣೆಗೆ ಒಳಪಡಿಸಲಾಯಿತು. 1837ರ ಜೂನ್ 19ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಕೊಡಗಿನ ವೀರಾಗ್ರಣಿಯನ್ನು ನೇಣಿಗೇರಿಸಲಾಯಿತು. ಇದೇ ಜೂನ್ 19ಕ್ಕೆ 162 ವರ್ಷಗಳಾದವು. ರೈತ ಸೈನ್ಯದ ನಾಯಕತ್ವವನ್ನು ವಹಿಸಿದ್ದ ಶೌರ್ಯ ತ್ಯಾಗಗಳ ಪ್ರತೀಕವಾಗಿದ್ದ ಪುಟ್ಟಬಸಪ್ಪರನ್ನು ಕೊಡಗಿನ ಜನತೆ, ಕೊಡಗಿನ ಚರಿತ್ರೆ ಮರೆತುಬಿಟ್ಟಿದೆ ಎಂದು ವಿದ್ಯಾಧರ್ ಸ್ಮರಿಸಿಕೊಂಡರು.

ಬಸವಣ್ಣ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ, 800 ವರ್ಷಗಳ ಹಿಂದಿನ ನಡೆ- ನುಡಿ ಒಂದೇ ಆಗಿದ್ದ ಮಹಾಪುರುಷ ಬಸವಣ್ಣ ಹಾಗೂ ಸಾಮಾಜಿಕ ಕಳಕಳಿಯ ಅಸ್ಪøಶ್ಯತೆಯ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಪುರುಷ ಡಾ. ಶಿವಕುಮಾರ ಸ್ವಾಮಿಯವರ ಜಯಂತಿ ಆಚರಣೆಗಿಂತ ಅವರುಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ವಚನಗಳ ಸಾರಾಮೃತ ಅರಿತು ಅನುಸರಿಸಬೇಕು ಎಂದು ಕರೆ ನೀಡಿದರು.

ಸಾನಿಧ್ಯ ವಹಿಸಿದ್ದ ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಇಲ್ಲದೇ ಇರುವ ಇತಿಹಾಸವನ್ನು ಸೃಷ್ಟಿ ಮಾಡುವ ಬದಲು ಇದ್ದಂತಹ ಇತಿಹಾಸವನ್ನೇ ಸ್ಮರಿಸಿಕೊಳ್ಳಬೇಕು. ರಾಜ ಪ್ರಭುತ್ವವನ್ನು ಗಟ್ಟಿಗೊಳಿಸುವ ಸಂದರ್ಭದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿದ. ಸಂಘಟನೆಗಾಗಿ ಹೋರಾಟ ಮಾಡಿದ ವೀರಸೇನಾನಿಗಳ ಸ್ಮರಣೆ ಅತ್ಯಗತ್ಯ. ಕೊಡಗನ್ನಾಳಿದ ರಾಜರ ಬಗ್ಗೆ ಚಿಂತನೆ ಅಗತ್ಯ. ಸಮಿತಿ ರಚನೆ ಮಾಡಿಕೊಂಡು ವೀರಸೇನಾನಿ ಪುಟ್ಟಬಸಪ್ಪನವರ ಸ್ಮರಣೆ ಕಾರ್ಯ ನಡೆಯಬೇಕು. ಬಸವಣ್ಣನವರ ನಂತರ ಶಿಕ್ಷಣವೇ ಶಕ್ತಿ. ಶಿಕ್ಷಣದ ಮೂಲಕ ಅಭಿವೃದ್ಧಿ ಸಾಧ್ಯ ಎಂದು ಸಾರಿದ ಶಿವಕುಮಾರಸ್ವಾಮೀಜಿ ನಿತ್ಯ ಸ್ಮರಣೀಯರು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ವಿದೇಶಗಳಲ್ಲಿ ಸ್ಮರಣೀಯರಾಗಿರುವ ಬಸವಣ್ಣ ಕರ್ನಾಟಕದಲ್ಲಿ ಅನಾದರಣೀಯರಾಗಿದ್ದಾರೆ. ಶರಣ ಸಾಹಿತ್ಯ ಪರಿಷತ್ತಿನ ಕೋರಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಆದೇಶದನ್ವಯ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲಾಗಿದೆ. ಪುಟ್ಟಬಸಪ್ಪನವರ ಭಾವಚಿತ್ರವನ್ನು ರಚಿಸಿಕೊಂಡು ಜಯಂತಿ ಆಚರಣೆ ಮಾಡಬೇಕು. ಕೊಡಗಿನ ಅರಮನೆ ಕುಸಿಯುತ್ತಿದೆ. ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೊಡಗಿನ ಜನತೆ ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.

ಕೊಡಗು ಪತ್ರಿಕಾ ಭವನದ ಟ್ರಸ್ಟಿ ಮನುಶೆಣೈ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಮಾತನಾಡಿದರು.

ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಹಾಗೂ ಕಾರ್ಯದರ್ಶಿ ಜಿ.ಎಂ. ಕಾಂತರಾಜ್ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಅಖಿತ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಹಾಲಪ್ಪ ಮಾತನಾಡಿದರು. ಕೊಡ್ಲಿಪೇಟೆ ಭದ್ರಕಾಳಿ ಸಂಘದ ಮಹಿಳಾ ಸದಸ್ಯರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ, ಮುಖಂಡರಾದ ಸಂದೀಪ್, ಮಹಾದೇವಪ್ಪ, ಸುರೇಶ್, ಕಾಂತರಾಜ್, ವೀರೇಂದ್ರಕುಮಾರ್, ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜ, ಕುಶಾಲನಗÀರ ಅಕ್ಕನ ಬಳಗದ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.