(ವಿಶೇಷ ವರದಿ : ಕೆ.ಕೆ.ನಾಗರಾಜಶೆಟ್ಟಿ)
ಕೂಡಿಗೆ, ಜೂ. 22: ಸರ್ಕಾರವು ವಸತಿ ರಹಿತರಿಗೆ ವಸತಿ ನಿರ್ಮಿಸಿಕೊಡಲು ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ಸೂಚನೆ ನೀಡುತ್ತ್ತಿದೆ. ಗ್ರಾಮ ಪಂಚಾಯ್ತಿಗಳು ಆ ವ್ಯಾಪ್ತಿಯ ನಿವೇಶನ ರಹಿತರನ್ನು ಪಟ್ಟಿ ಮಾಡಿ ಅವರಿಗೆ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಬೇಕು, ವಿಪರ್ಯಾಸವೆಂದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ವಸತಿ ರಹಿತರನ್ನು ಬಿಟ್ಟು ವಸತಿ ಇರುವವರಿಗೆ ಮನೆಗಳನ್ನು ನೀಡಿ, ವಸತಿ ರಹಿತರಿಗೆ ಅನ್ಯಾಯವೆಸಗುತ್ತಿರುವದು ಕಂಡುಬರುತ್ತದೆ.
ಇದಕ್ಕೆ ನಿದರ್ಶನವೆಂಬಂತೆ ಕೂಡಿಗೆ ಗ್ರಾಮ ಪಂಚಾಯ್ತಿಯ ಮಲ್ಲೇನಹಳ್ಳಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳು ಇಂದೋ ನಾಳೆಯೋ ಬೀಳುವ ಹಂತದಲ್ಲಿರುವ ಮನೆಯೊಂದರಲ್ಲಿ ವಾಸವಿದ್ದು, ಇವರು ಗ್ರಾಮ ಪಂಚಾಯಿತಿ ಪ್ರತೀ ಗ್ರಾಮ ಸಭೆ, ಮಾಸಿಕ ಸಭೆಗಳಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ, ಇದುವರೆಗೂ ಮನೆ ಮಂಜೂರು ಮಾಡಿಲ್ಲ. ಆದರೆ, ವಸತಿ ವ್ಯವಸ್ಥೆ ಇರುವವರಿಗೆ ಮನೆಗಳನ್ನು ಮಂಜೂರು ಮಾಡಿರುವ ಬಗ್ಗೆ ವರದಿಯಾಗಿದೆ.
ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಣಾಮ ಮನೆಯು ಸಂಪೂರ್ಣ ಹಾನಿಯಾಗಿದ್ದು, ಆ ಸಂದರ್ಭ ಶಾಸಕರಾದ ಅಪ್ಪಚ್ಚುರಂಜನ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ, ತಾಲೂಕು ದಂಡಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದು ಮನೆ ನಿರ್ಮಿಸಿ ಕೊಡುವದಾಗಿ ನೀಡಿದ್ದ ಭರವಸೆ ಹಾಗೆÉಯೇ ಹೊರತು ಯಾವದೇ ಪ್ರಯೋಜನವಾಗಿಲ್ಲ ಎಂದು ಆ ಮನೆಯ ಪದ್ಮ ಮತ್ತು ವೆಂಕಟೇಶ್ ಆರೋಪಿಸಿದ್ದಾರೆ.
ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಮನೆ ಗೋಡೆ ಬಿರುಕು ಮತ್ತು ಮೇಲ್ಛಾವಣಿ ಹಾರಿ ಹೋಗಿದ್ದು, ಭಾರಿ ಮಳೆ ಸುರಿದಾಗ ಮಳೆ ನೀರು ಮನೆಯೊಳಗೆ ಸೋರುತ್ತದೆ. ಗೋಡೆಗಳು ಬಿರುಕು ಬಿಟ್ಟಿವೆ. ಜೋರಾದ ಗಾಳಿ ಬಂದರೇ ಮನೆಯೂ ಬೀಳುತ್ತದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಮಗೆ ಮನೆ ನೆಲಕಚ್ಚಿದರೆ ಇರಲು ಬೇರೆ ವ್ಯವಸ್ಥೆ ಇಲ್ಲ. ಪತಿ ವೆಂಕಟೇಶ್ ಟಿ.ಬಿ. ರೋಗದಿಂದ ಬಳಲುತ್ತಿದ್ದು, ಅವರ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಕಷ್ಟ ಪಡುತ್ತಿದ್ದೇವೆ. ಮನೆಯ ಮೇಲ್ಚಾವಣಿ ಹಾರಿಹೋಗಿದ್ದು ಟಾರ್ಪಲ್ ಅನ್ನು ಮೇಲ್ಚಾವಣಿಗೆ ಹೊಂದಿಸಿಕೊಂಡು ಮನೆಯೂ ಬೀಳುವ ಸ್ಥಿತಿಯಲ್ಲಿದ್ದು, ಪ್ರತೀ ದಿನವೂ ಭಯದಿಂದ ಬದುಕುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಗ್ರಾಮ ಪಂಚಾಯ್ತಿಯವರು ನಮ್ಮ ಅರ್ಜಿಯನ್ನು ಪರಿಗಣಿಸದೇ ವಸತಿ ವ್ಯವಸ್ಥೆ ಇರುವವರಿಗೆ ಮನೆಗಳನ್ನು ಮಂಜೂರು ಮಾಡಿ ನಮಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಪದ್ಮ ಆರೋಪಿಸಿದ್ದಾರೆ.
2018-19ನೇ ಸಾಲಿನಲ್ಲಿ ಈಗಾಗಲೇ 20 ಮನೆಗಳು ಮಂಜೂರಾಗಿದ್ದು, ಈಗಿರುವ ಸದಸ್ಯರು ತಲಾ ಒಂದರಂತೆ ಒಂದೊಂದು ವಾರ್ಡಿಗೆ ಮನೆಯ ಹಂಚಿಕೆಯನ್ನು ಮಾಡಿಕೊಂಡಿರುವದು ಕಂಡುಬಂದಿದೆ.
ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ, ಈ ಹಿಂದೆ ಇದ್ದ ಅಧಿಕಾರಿಗಳು ಇದರತ್ತ ಗಮನಹರಿಸದೇ ಇರಬಹುದು. ಆದರೆ, ನಾನು ಹೊಸದಾಗಿ ನೇಮಕಗೊಂಡಿದ್ದು, ಇವರ ಅರ್ಜಿಗಳನ್ನು ಪಡೆದು ಪಟ್ಟಿಯಲ್ಲಿ ಸೇರಿಸಿ, ಅಂಬೇಡ್ಕರ್ ವಸತಿ ಯೋಜನೆಯಡಿ ವಸತಿಯನ್ನು ಮಂಜೂರು ಮಾಡಲಾಗುವದು ಎಂದು ತಿಳಿಸಿದ್ದಾರೆ.
ಆ ವಾರ್ಡಿನ ಜನಪ್ರತಿನಿಧಿಗಳನ್ನು ಮಾತನಾಡಿಸಿದಾಗ, ಈ ಭಾರಿ ಮನೆಗಳು ಕಡಿಮೆ ಮಂಜೂರು ಆಗಿದ್ದು, ಮೊದಲೇ ತಯಾರಿಸಿದ್ದ ಪಟ್ಟಿಯಲ್ಲಿದ್ದ ಫಲಾನುಭವಿಗಳಿಗೆ ಮನೆಗಳನ್ನು ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.
ಪರಿಗಣಿಸದ ಕಂದಾಯ ಇಲಾಖೆ ಅಧಿಕಾರಿಗಳು : ಕಳೆದ ಪ್ರಕೃತಿ ವಿಕೋಪದ ಸಂದರ್ಭ ಕ್ಷೇತ್ರದ ಶಾಸಕರು ಭೇಟಿ ನೀಡಿ ಪರಿಶೀಲಿಸಿದ್ದರು. ಮನೆಯು ತೀರಾ ಹಾಳಾಗಿರುವ ಈ ಪರಿಶಿಷ್ಟ ಪಂಗಡದ ಕುಟುಂಬಕ್ಕೆ ಇದುವರೆಗೂ ಯಾವದೇ ರೀತಿಯಲ್ಲಿ ಬದಲಿ ವ್ಯವಸ್ಥೆ ನೀಡುವ ಅಥವಾ ಮನೆಯನ್ನು ಮಂಜೂರು ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ. ಅಂದು ಬಂದಿದ್ದ ಕಂದಾಯ ಅಧಿಕಾರಿಗಳು ಬರೀ ಮಾಹಿತಿ ಪಡೆದುಕೊಂಡು ಹೋದರೇ ವಿನಃ ಇದುವರೆಗೂ ಬಂದಿಲ್ಲ. ಕೂಲಿ ಕಾರ್ಮಿಕರಾಗಿರುವ ಇವರಿಗೆ ಒಂದೇ ಒಂದು ಪ್ಲಾಸ್ಟಿಕ್ ಹೊದಿಕೆಯನ್ನು ನೀಡದಿರುವದು ದುರಂತದ ಸಂಗತಿ. ಅಲ್ಲದೆ, ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ ಮತ್ತು ಕೂಡುಮಂಗಳೂರು ಎರಡೂ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆದರೂ ಅಲ್ಲಿಗೆ ಬಂದಿದ್ದ ಒಂದೇ ಒಂದು ಸಾಮಾಗ್ರಿಗಳನ್ನು ಈ ಕುಟುಂಬದವರಿಗೆ ನೀಡಿಲ್ಲ. ಇಂದೋ ನಾಳೆ ಬೀಳುವ ಹಂತದಲ್ಲಿರುವ ಮನೆಗೆ ಸಂಬಂಧಪಟ್ಟ ಅಧಿಕಾರಿ ವರ್ಗದವರು ತುರ್ತಾಗಿ ಭೇಟಿ ನೀಡಿ ಮನೆ ನಿರ್ಮಿಸಿಕೊಡುವಲ್ಲಿ ಕಾರ್ಯೋನ್ಮುಖರಾಗಬೇಕಾಗಿ ಕೂಲಿ ಕಾರ್ಮಿಕರಾದ ಪದ್ಮ ಮತ್ತು ವೆಂಕಟೇಶ್ ಹಾಗೂ ಈ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಂತಹದ್ದೇ ಘಟನೆ ಪಕ್ಕದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲು ನಡೆದಿದೆ. ಬಸವೇಶ್ವರ ಬಡಾವಣೆಯ ಮಂಜುಳಾ ಎಂಬುವವರ ಮನೆಯು ಮಳೆಯಿಂದಾಗಿ ತೀರಾ ಹಾನಿಯಾಗಿತ್ತು. ಆದರೆ, ಕೂಡುಮಂಗಳೂರು ಗ್ರಾಮ ಪಂಚಾಯ್ತಿಗೆ ಮತ್ತು ಕಂದಾಯ ಇಲಾಖೆಗೆ ಕಂದಾಯ ಇಲಾಖೆಗೆ ಅನೇಕ ಭಾರಿ ಅರ್ಜಿ ಸಲ್ಲಿಸಿ ಅವರು ಬಂದು ಸ್ಥಳ ಪರಿಶೀಲಿಸಿ ಪರಿಹಾರ ಕೊಡುವದಾಗಿ ಭರವಸೆ ನೀಡಿ ತೆರಳಿದವರು ಇದುವರೆಗೂ ಸ್ಪಂದಿಸಿಲ್ಲ. ಮಂಜುಳಾ ಅವರು ಮೂರು ತಿಂಗಳಿನಿಂದ ಕಂದಾಯ ಇಲಾಖೆಗೆ ಪರಿಹಾರ ಮತ್ತು ವಸತಿಯನ್ನು ನಿರ್ಮಿಸಿಕೊಡುವದರ ಬಗ್ಗೆ ಅಲೆದರು ಇದುವರೆಗೂ ಯಾವದೇ ರೀತಿಯ ಪರಿಹಾರವೇ ದೊರತಿಲ್ಲ. ಕೂಲಿ ಕಾರ್ಮಿಕರಾಗಿರುವ ಮಂಜುಳಾ ವಾರಕ್ಕೆ ಎರಡು ದಿನ ದಿನಗೂಲಿ ಕೆಲಸವನ್ನು ಬಿಟ್ಟು ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆವದು ಸಾಮಾನ್ಯವಾಗಿದೆ. ಗ್ರಾಮ ಪಂಚಾಯ್ತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಬ್ಬರೂ ತನ್ನ ಅರ್ಜಿಗೆ ಸ್ಪಂದಿಸದೇ ಗಮನಹರಿಸಿಲ್ಲ. ಮನೆಯು ಬೀಳುವ ಹಂತದಲ್ಲಿದ್ದರೂ ಮನೆಗೆ ಗೋಡೆಯ ಹಾಗಿ ಟಾರ್ಪಲ್ ಅನ್ನು ಸುತ್ತಿ, ಮೇಲ್ಚಾವಣಿಗೂ ಟಾರ್ಪಲ್ ಹೊದಿಕೆ ಹೊದಿಸಿ ಅದೇ ಮನೆಯಲ್ಲಿ ವಾಸಿಸುವದನ್ನು ಬಿಟ್ಟರೆ ಬೇರ್ಯಾವ ವ್ಯವಸ್ಥೆಯೂ ನನಗಿಲ್ಲ ಎಂದು ಮಂಜುಳಾ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.