ಸೋಮವಾರಪೇಟೆ, ಜೂ. 22: ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನೆಹರು ಯುವ ಕೇಂದ್ರ, ಜಿಲ್ಲೆ ಹಾಗೂ ತಾಲೂಕು ಯುವ ಒಕ್ಕೂಟ, ತೋಳೂರುಶೆಟ್ಟಳ್ಳಿಯ ಕಾವೇರಿ ಮಾತಾ ಯುವತಿ ಮಂಡಳಿ ಆಶ್ರಯದಲ್ಲಿ ಅಲ್ಲಿನ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನೆರೆಹೊರೆ ಯುವಜನ ಸಂಸತ್ತು ಕಾರ್ಯಕ್ರಮ ನಡೆಯಿತು.

ತಾಲೂಕು ಯುವ ಒಕ್ಕೂಟದ ಸ್ಥಾಪಕಾಧ್ಯಕ್ಷ ಕೆ.ಸಿ. ಉದಯಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಯುವ ಒಕ್ಕೂಟದ ತಾಲೂಕು ಅಧ್ಯಕ್ಷೆ ಚಂದ್ರಿಕಾ ಅಧ್ಯಕ್ಷತೆ ವಹಿಸಿದ್ದರು. ತೋಳೂರುಶೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ಉಮೇಶ್, ಜಿಲ್ಲಾ ಯುವ ಒಕ್ಕೂಟದ ಮಾಜೀ ಅಧ್ಯಕ್ಷ ಎಂ.ಡಿ. ಹರೀಶ್ ಅವರುಗಳು ಭಾಗವಹಿಸಿದ್ದರು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಯೋಗ ಶಿಕ್ಷಣದ ಪಾತ್ರ ವಿಷಯದ ಬಗ್ಗೆ ಯೋಗ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು. ನೆಹರು ಯುವ ಕೇಂದ್ರ ಮತ್ತು ಅದರ ಕಾರ್ಯಕ್ರಮಗಳ ಬಗ್ಗೆ ರಾಷ್ಟ್ರೀಯ ಯುವ ಕಾರ್ಯಕರ್ತ ಎಂ.ಬಿ. ವಿವೇಕ್ ಮಾಹಿತಿ ನೀಡಿದರು.

ಗ್ರಾ.ಪಂ. ಸದಸ್ಯ ರಜಿತ್, ಮಾಜೀ ಅಧ್ಯಕ್ಷ ನಿಂಗಪ್ಪ, ಯುವ ಒಕ್ಕೂಟದ ಉಪಾಧ್ಯಕ್ಷ ಮಹೇಶ್, ಖಜಾಂಚಿ ಮೀರಾ, ಕಾರ್ಯದರ್ಶಿ ಆದರ್ಶ್, ಕಾವೇರಿ ಮಾತಾ ಯುವತಿ ಮಂಡಳಿ ಅಧ್ಯಕ್ಷೆ ಅಂಬಿಕ ಸೇರಿದಂತೆ ಇತರರು ಉಪಸ್ಥಿತರಿದ್ದರು.