ಸುಂಟಿಕೊಪ್ಪ, ಜೂ. 22: ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿ ನೀಡದೆ ತರಾತುರಿಯಲ್ಲಿ ಗ್ರಾಮಸಭೆಯನ್ನು ನಡೆಸಿ ಕಾಟಾಚಾರಕ್ಕೆ ವರದಿ ನೀಡಲು ಮುಂದಾಗಿರುವದಾಗಿ ಆರೋಪಿಸಿ ಹರದೂರು ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಓ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಹರದೂರು ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆಯನ್ನು ತಾ. 20 ರಂದು ಗ್ರಾ.ಪಂ. ಅಧ್ಯಕ್ಷೆ ಸುಮಾ ಅವರ ಅಧ್ಯಕ್ಷತೆಯಲ್ಲಿ ಹೊಸತೋಟ ಗರಗಂದೂರು ‘ಬಿ’ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಬಗ್ಗೆ ಸರಿಯಾಗಿ ಪ್ರಚಾರ ನಡೆಸದೆ ಆಯ್ದ ಕೆಲವು ಮಂದಿಗೆ ಮಾತ್ರ ಸಭೆಯ ಮಾಹಿತಿ ನೀಡಿದ್ದರಿಂದ ಸಭೆಗೆ ಬಂದ ಬೆರಳೆಣಿಕೆಯ ಮಂದಿ ಪಿಡಿಓ ಅವರನ್ನು ಪ್ರಶ್ನಿಸಿ ಇದೇನು ಗುಪ್ತ ಸಭೆಯಾ ಏತಕ್ಕಾಗಿ ಕಾಟಾಚಾರದ ಸಭೆ ನಡೆಸುತ್ತಿದ್ದೀರಾ ಇಂದು ಬೆಳಿಗ್ಗೆ 8.30 ಗಂಟೆಗೆ ಕೆಲವರಿಗೆ ಸಭೆ ಇರುವ ಬಗ್ಗೆ ತಿಳಿಸಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ತಬ್ಬಿಬ್ಬಾದ ಪಿಡಿಓ ಹಾಗೂ ಅಧ್ಯಕ್ಷರು ಸಮಜಾಯಿಷಿಕೆ ನೀಡಲು ಮುಂದಾದರೂ ಗ್ರಾಮಸ್ಥರು ಸಭೆ ಮುಂದೂಡಲುಪಟ್ಟು ಹಿಡಿದ ಮೇರೆಗೆ ಸಭೆಯನ್ನು ಮುಂದೂಡಲಾಯಿತು.