ಗೋಣಿಕೊಪ್ಪಲು, ಜೂ. 22: ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಣೆಯೊಂದಿಗೆ ಇಲಾಖೆಯ ನಿಯಮದಡಿ ವಿದ್ಯಾರ್ಥಿಗೆ ನೀಡುವ ಸವಲತ್ತುಗಳನ್ನು ಸರಿಯಾಗಿ ವಿತರಿಸುವಂತೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದಂತೆಯೇ ಆರ್ಜಿ ಗ್ರಾಮದ ಮೊರಾರ್ಜಿ ವಸತಿ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ, ಶಿಕ್ಷಕ, ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದರು. ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. 144 ವಿದ್ಯಾರ್ಥಿಗಳು ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರತಿ ನಿತ್ಯ ಬೆಳಗಿನ ಉಪಹಾರ ಉಪ್ಪಿಟ್ಟು ಸೇವನೆ ತೃಪ್ತಿದಾಯಕವಾಗಿಲ್ಲ. ಬದಲಿ ವ್ಯವಸ್ಥೆ ಮಾಡುವಂತೆ ಅಧ್ಯಕ್ಷರಲ್ಲಿ ವಿದ್ಯಾರ್ಥಿಗಳು ತಮ್ಮ ಅಹವಾಲನ್ನು ತೋಡಿಕೊಂಡರು. ಸ್ಥಳದಲ್ಲಿದ್ದ ವಾರ್ಡ್‍ನ್‍ಗೆ ಈ ಬಗ್ಗೆ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಂದ ಮತ್ತೆ ದೂರು ಬರದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು. ವಿದ್ಯಾರ್ಥಿಗಳಿಗೆ ಇಲಾಖೆ ನೀಡಿರುವ ಹಾಸಿಗೆ, ಹೊದಿಕೆಗಳ ಗುಣಮಟ್ಟವನ್ನು ಪರಿಶೀಲಿಸಿದರು. ಭೇಟಿಯ ಸಂದರ್ಭ ಬಿಟ್ಟಂಗಾಲ ಜಿಲ್ಲಾ ಪಂಚಾಯಿತಿ ಸದಸ್ಯೆ ಭವ್ಯ, ಅಧ್ಯಕ್ಷರ ಆಪ್ತ ಸಹಾಯಕ ಜಪ್ಪು ಸುಬ್ಬಯ್ಯ ವಸತಿ ನಿಲಯದ ಪ್ರಾಂಶುಪಾಲೆ ಮಮತ ಹಾಜರಿದ್ದರು.