ಸುಂಟಿಕೊಪ್ಪ, ಜೂ. 22: ಕೊಡಗು ಜಿಲ್ಲೆಯಲ್ಲಿ ಮರ ಸಾಗಾಣಿಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವದನ್ನು ಸರಿಪಡಿಸಬೇಕೆಂದು ಜಿಲ್ಲಾ ಮರ ಕೆಲಸ ಮತ್ತು ತಲೆಹೊರೆ ಕೆಲಸದವರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

ಸುಂಟಿಕೊಪ್ಪ ಮಾರುಕಟ್ಟೆ ಯಲ್ಲಿರುವ ಸಂಘದ ಕಛೇರಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಟಿ.ಪಿ.ಮುತ್ತುರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ವರ್ಷದ ಅತಿವೃಷ್ಠಿಯಿಂದ ಜಿಲ್ಲೆಯ ಜನತೆಗೆ ಅಪಾರ ನಷ್ಟವಾಗಿದ್ದು, ಕೇವಲ ಮರಗಳನ್ನು ಸಾಗಿಸುವದರಿಂದ ರಸ್ತೆ ಹಾಳಾಗುತ್ತದೆ ಎಂಬ ಕಲ್ಪನೆ ಸರಿಯಲ್ಲ. ಲೋಕೋಪಯೋಗಿ ಇಲಾಖೆಯಿಂದ ಗುಣಮಟ್ಟದ ರಸ್ತೆ ನಿರ್ಮಿಸದೆ, ರಸ್ತೆ ಬದಿಯಲ್ಲಿರುವ ಮರದ ರೆಂಬೆ ಕಡಿಯದೇ ಇರುವದರಿಂದ ರಸ್ತೆ ಹಾಳಾಗುತ್ತಿದೆ ಎಂದು ಟೀಕಿಸಿದ್ದಾರೆ. ಸಂಘದ ಕಾರ್ಯದರ್ಶಿ ಕುಟ್ಟಪ್ಪ ನಿರ್ಣಯ ಮಂಡಿಸಿದರು.

ಈ ಸಭೆಯಲ್ಲಿ ಕುಶಾಲನಗರ ವ್ಯಾಪ್ತಿಯ ಅಧ್ಯಕ್ಷ ದಾವೂದ್,ಪೊನ್ನತ್‍ಮೊಟ್ಟೆಯ ಸುಧೀರ್, ಸುಂಟಿಕೊಪ್ಪದ ಅಧ್ಯಕ್ಷ ಬೆಟ್ಟಪ್ಪ, ಉಪಾಧ್ಯಕ್ಷ ಇಲ್ಯಾಸ್, ಕಾರ್ಯದರ್ಶಿ ರಶೀದ್ ಮತ್ತು ಸದಸ್ಯರು ಭಾಗವಹಿಸಿದ್ದರು.