ಸೋಮವಾರಪೇಟೆ, ಜೂ.21: ಸೋಮವಾರಪೇಟೆಯಲ್ಲಿ ಕಳೆದ 1998ರಲ್ಲಿ ಸ್ಥಾಪನೆಯಾದ ರೋಟರಿ ಸಂಸ್ಥೆ ಪ್ರಸ್ತುತ 1 ಕೋಟಿ ವೆಚ್ಚದಲ್ಲಿ ಸ್ವಂತ ಭವನ ಹೊಂದುವತ್ತ ಮುಂದಡಿಯಿಟ್ಟಿದ್ದು, ಪ್ರಾಥಮಿಕ ಹಂತದಲ್ಲಿ ರೂ. 45 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿರುವ ರೋಟರಿ ಭವನದ ಉದ್ಘಾಟನೆಯನ್ನು ರೋಟರಿ 3181ರ ಜಿಲ್ಲಾ ರಾಜ್ಯಪಾಲ ಪಿ. ರೋಹಿನಾಥ್ ನೆರವೇರಿಸಿದರು.
ಪಟ್ಟಣದ ಕರ್ಕಳ್ಳಿ ರಸ್ತೆಯಲ್ಲಿರುವ ರೋಟರಿ ಸಂಸ್ಥೆಗೆ ಸೇರಿದ 20 ಸೆಂಟ್ಸ್ ನಿವೇಶನದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೋಮವಾರಪೇಟೆ ರೋಟರಿ ಸಂಸ್ಥೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ರುವದು ಶ್ಲಾಘನೀಯ ಕಾರ್ಯ ಎಂದರಲ್ಲದೆ, ಭವನಕ್ಕೆ ತಾವು 5 ಲಕ್ಷ ದೇಣಿಗೆ ನೀಡುವದಾಗಿ ಘೋಷಿಸಿದರು.
ಪ್ರೀತಿ, ವಿಶ್ವಾಸ ಸಹಬಾಳ್ವೆಯಿಂದ ಸಮಾಜದ ಕಾರ್ಯ ನಡೆಸಿದರೆ ಸಾರ್ಥಕತೆ ಸಿಗುತ್ತದೆ. ಸಮಾಜ ಸೇವೆಯಲ್ಲಿ ರೋಟರಿ ಸಂಸ್ಥೆ ಸದಾ ಮುಂದಿದ್ದು, ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿದೆ. ಪ್ರತಿಯೋರ್ವರೂ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ಪಿ.ಕೆ. ರವಿ ಮಾತನಾಡಿ, ಕಳೆದ 1 ವರ್ಷಗಳಲ್ಲಿ ರೋಟರಿ ಸಂಸ್ಥೆ ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಕಾರ್ಯ ಮಾಡಿದೆ. ಈ ಅವಧಿಯಲ್ಲಿ 30 ಪ್ರಶಸ್ತಿಗಳಿಗೂ ಭಾಜನವಾಗಿದೆ ಎಂದರು.
ರೋಟರಿ ಭವನ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸದಾನಂದ್ ಮಾತನಾಡಿ, ರೋಟರಿ ಭವನ ನಿರ್ಮಾಣ ಎಲ್ಲಾ ಸದಸ್ಯರ ಕನಸ್ಸಾಗಿತ್ತು. ಸಂಸ್ಥೆಯ ಸದಸ್ಯರುಗಳು, ಸಮಾಜದ ದಾನಿಗಳು, ಜನಪ್ರತಿನಿಧಿಗಳ ಸಹಕಾರದಿಂದ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸ ಲಾಗಿದ್ದು, ನೆಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ರೋಟರಿ ಜಿಲ್ಲಾ ರಾಜ್ಯಪಾಲರು ರೂ. 5ಲಕ್ಷ ದೇಣಿಗೆ ನೀಡಲು ಮುಂದಾಗಿರುವದು ಶ್ಲಾಘನೀಯ ವಾಗಿದ್ದು, ಸಭಾಂಗಣಕ್ಕೆ ಅವರ ಹೆಸರನ್ನೇ ಇಡಲಾಗುವದು. ಭವನ ಸಂಪೂರ್ಣಗೊಳ್ಳಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭ ಭವನ ನಿರ್ಮಾಣಕ್ಕೆ ಪಟ್ಟಣದ ಚನ್ನಬಸಪ್ಪ ಅವರು ರೂ. 5 ಲಕ್ಷ ದೇಣಿಗೆ ನೀಡಿದರು. ವೇದಿಕೆಯಲ್ಲಿ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ, ಟ್ರಸ್ಟ್ ಕಾರ್ಯದರ್ಶಿ ಜಿ.ಜೆ. ಗಿರೀಶ್, ರೋಟರಿ ಕಾರ್ಯದರ್ಶಿ ನಾಗೇಶ್ ಉಪಸ್ಥಿತರಿದ್ದರು.