ಮಡಿಕೇರಿ, ಜೂ. 21: ಫೋಕ್ಸೋ ಅಪರಾಧ ವಿಚಾರಣಾ ನ್ಯಾಯಾಲಯ ಗಳನ್ನು ಬಾಲಸ್ನೇಹಿ ನ್ಯಾಯಾಲಯ ಗಳಾಗಿ ಪರಿವರ್ತಿಸಲಾಗುತ್ತಿದ್ದು, ಕೊಡಗಿನ ನೂತನ ನ್ಯಾಯಾಲಯ ಕಟ್ಟಡದಲ್ಲೂ ನವೀನ ನ್ಯಾಯಾಲಯ ಮೇಲ್ಬರಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ನುಡಿದರು.

ಇತ್ತೀಚೆಗೆ ಇಲ್ಲಿನ ಸ್ನೇಹಾಶ್ರಯ ಸಮಿತಿ (ಓಡಿಪಿ)ಯ ಹನ್ನೆರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಕಾನೂನು ಅರಿವು ಹಾಗೂ ಸೋಂಕಿತ ಮಕ್ಕಳ ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಿ ಮಾತನಾಡಿದರು. ಫೋಕ್ಸೋ ಸಂತ್ರಸ್ತ ಮಕ್ಕಳ ನ್ಯಾಯಾಲಯವು ಮಕ್ಕಳ ಮನಸನ್ನು ಆಕರ್ಷಿಸುವ ವಿನ್ಯಾಸ, ವ್ಯವಸ್ಥೆಯೊಂದಿಗೆ ಕಟ್ಟಲ್ಪಡಲಿದ್ದು, ಮಕ್ಕಳ ಪೋಷಕರೂ ವಿರಮಿಸಲು ಕೋಣೆಯಿರುತ್ತದೆ. ಸರಕಾರಿ ವಕೀಲರೊಂದಿಗೆ ಪ್ರತ್ಯೇಕ ವಕೀಲರ ನೇಮಕವನ್ನೂ ಮಾಡಿಕೊಡಲಿದ್ದು, ಕಟಕಟೆ ರಹಿತ, ಸಮವಸ್ತ್ರ (ಕರಿಕೋಟು) ರಹಿತ ನ್ಯಾಯಾಲಯ ಇದಾಗಿರುತ್ತದೆ. ಮಕ್ಕಳ ವಿಚಾರಣೆ ಯನ್ನು ಸ್ನೇಹ ವಾತಾವರಣದಲ್ಲಿ ಮಾಡಲಿದ್ದು, ಒತ್ತಡ ಹೇರಿಕೆ, ಅಪರಾಧಿಯ ಮುಖದರ್ಶನ ಆಗದಂತೆ ಕ್ಯಾಮರಾ ವಿಚಾರಣೆ ನಡೆಸಲಾಗುತ್ತದೆ. ಮಕ್ಕಳ ಹಿತರಕ್ಷಣೆ ಕುರಿತು ಮಾತನಾಡಿದ ಅವರು, ಹೆಣ್ಣು ಮಕ್ಕಳನ್ನು ನಿರ್ಧಾಕ್ಷಿಣ್ಯವಾಗಿ ಒಬ್ಬಂಟಿ ಗಂಡಸರು-ನೆಂಟರೊಂದಿಗೆ ಬಿಡದಂತೆ ಪೋಷಕರಲ್ಲಿ ಮನವಿ ಮಾಡಿದರು.

ಸಮಾಜದಲ್ಲಿ ಹಿಂದಿನಂತೆ ದೇವರ ಮೇಲಿನ ಭಯ ಇಲ್ಲದಿರು ವದು, ಸಂಸ್ಕಾರದ ಕೊರತೆಯಿಂದ ಮೌಲ್ಯಗಳು ಕುಸಿಯುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು. ಇದೀಗ ಫೋಕ್ಸೋ ಕಾಯ್ದೆಯಡಿ ಹಲವರಿಗೆ (ಪೋಷಕರೂ ಸೇರಿ) ಜೀವಾವಧಿ ಶಿಕ್ಷೆಯೂ ಆಗಿದ್ದು, ಕಾನೂನಿನನ್ವಯ ಇದನ್ನು ಪ್ರಚಾರಕ್ಕೆ ತರುತ್ತಿಲ್ಲ ಎಂದರು.

ಮಕ್ಕಳಿಗೆ ಕೇಕ್ ಕತ್ತರಿಸಿ ಮಾತನಾಡಿದ ‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಹೆಚ್‍ಐವಿ ಸೋಂಕಿತ, ಪೀಡಿತ ಕುಟುಂಬಗಳ ಮಕ್ಕಳು ಅನಾಥರಾಗಿ ಪರಿತಪಿಸುತ್ತಿದ್ದು, ಇಂತಹ ಕುಟುಂಬಗಳ ಜವಾಬ್ದಾರಿ ಹೊರಲು ಸಮಾಜ ಮುಂದೆ ಬರಬೇಕಾದ ಅನಿವಾರ್ಯತೆ ಇದೆ ಎಂದರು. ಇಂತಹ ಮಕ್ಕಳ ಪೋಷಣೆಯ ಕುರಿತು ಜಾಗೃತಿ ಮೂಡಿಬರಬೇಕಿದ್ದು, ದೇವಾಲಯ, ಮಸೀದಿ, ಇಗರ್ಜಿ ಕಟ್ಟುವ ಮೊದಲು ಇಂತಹವರ ಬಾಳಿನಲ್ಲಿ ಬೆಳಕಾಗುವದು ಹೆಚ್ಚು ಅರ್ಥಪೂರ್ಣ ಎಂದರು.

ಸ್ನೇಹಾಶ್ರಯದ ಅಧ್ಯಕ್ಷ ಬೇಬಿ ಮ್ಯಾಥ್ಯೂವ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಮ್ತಾಜ್, ಜಾಯ್ಸ್ ಮೆನೆಜಸ್ ಹಾಗೂ ಇತರರು ತಮ್ಮ ಮಕ್ಕಳೊಂದಿಗೆ ಸಂತ್ರಸ್ತ ಮಕ್ಕಳನ್ನು ಸಂತೈಸುವ ರೀತಿ ಇತರರಿಗೆ ಮಾದರಿ ಎಂದರು.

ಅಧ್ಯಕ್ಷ ಬೇಬಿ ಮ್ಯಾಥ್ಯೂ ಮಾತನಾಡಿ, 2008ರಲ್ಲಿ ಕ್ಲಿಂಟನ್ ಫೌಂಡೇಶನ್ ಸ್ನೇಹಾಶ್ರಯ ಸಮಿತಿ ಮೂಲಕ ಸೋಂಕಿತ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಆರಂಭಿಸಿತು. ಆದರೆ, ನಡುವಿನಲ್ಲಿ ಇದು ನಿಂತಾಗ ತಮ್ಮ ನೇತೃತ್ವದಲ್ಲಿ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸೇವಾ ಕಾರ್ಯ ಮುಂದುವರಿಸಿರುವದಾಗಿ ನುಡಿದರು.

ಫಾ. ಸ್ಟಾನಿ ಅಲ್ಮೆಡಾ, ಫಾ. ಅಲೆಕ್ಸ್ ಪ್ರಶಾಂತ್ ಸಿಕ್ವೇರ, ಸ್ನೇಹಾಶ್ರಯದ ಚಟುವಟಿಕೆಯನ್ನು ಶ್ಲಾಘಿಸಿದರು. ಸೋಂಕಿತ ಮಕ್ಕಳ ಕುರಿತು ಎಲ್ಲರಲ್ಲೂ ಕಳಕಳಿ ಮೂಡಬೇಕೆಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ಸುನಿತಾ ಮಾತನಾಡಿ, ಸೋಂಕಿತ, ಪೀಡಿತ ಮಕ್ಕಳಿಗೆ, ಸಂತ್ರಸ್ತರಿಗೆ ಇರುವ ಧನಸಹಾಯ, ಉಚಿತ ಶುಶ್ರೂಷೆಗಳ ವಿವರ ನೀಡಿದರು. ಸೋಂಕಿತರು ಸಮಾಜದ ಮುಖ್ಯ ವಾಹಿನಿಯೊಂದಿಗೆ ಬೆರೆತು ಬಾಳುವ ಮನೋಬಲ ಬೆಳೆಸಿಕೊಳ್ಳ ಬೇಕೆಂದರು. ಜಿಲ್ಲೆಯಲ್ಲಿ ಸುಮಾರು 202 ಸಂತ್ರಸ್ತರು ಇರುವದಾಗಿ ಹೇಳಿದರು.

ನ್ಯಾಯಾಲಯ ಸಿಬ್ಬಂದಿ ಜಯಪ್ಪ ಅವರು ನಿರೂಪಿಸಿದರು. ವೇದಿಕೆಯಲ್ಲಿ ಓಡಿಪಿ ಸಂಸ್ಥೆಯ ಮೋಲಿ ಪೊಡ್ತದೊ ಹಾಗೂ ಇತರರು ಹಾಜರಿದ್ದರು.