ಮಡಿಕೇರಿ, ಜೂ. 21: ಕೊಡಗು ಜಿಲ್ಲೆಯಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ತಾ. 23 ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಗೋಣಿಕೊಪ್ಪದಲ್ಲಿ ದುಂಡು ಮೇಜಿನ ಸಂವಾದ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ, ತಿಳಿಸಿದ್ದಾರೆ. ಅನೇಕ ವರ್ಷಗಳಿಂದ ಬೆಳೆಗಾರರು ಅನುಭವಿಸಿಕೊಂಡು ಬರುತ್ತಿರುವ ಸಮಸ್ಯೆಗಳಿಗೆ ಪರಿಹಾ ರೋಪಾಯವನ್ನು ಕಂಡುಕೊಳ್ಳಲು ಸಂವಾದ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಗೋಣಿಕೊಪ್ಪದ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ತಾ. 23 ರಂದು ಬೆಳಿಗ್ಗೆ 10.30 ಗಂಟೆಗೆ ಸಂವಾದ ನಡೆಯಲಿದೆ. ವಿವಿಧ ಬೇಡಿಕೆಗಳನ್ನು ಸರಕಾರದ ಮುಂದೆ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಉದ್ದೇಶದಿಂದ ಸಂವಾದಕ್ಕೆ ಹಾಸನ, ಚಿಕ್ಕಮಗಳೂರು ಮತ್ತು ಮೈಸೂರು ವಿಭಾಗದ ರೈತರು ಹಾಗೂ ಬೆಳೆಗಾರರನ್ನು ಆಹ್ವಾನಿಸಲಾಗಿದೆ ಎಂದರು. ಕಾಫಿ ಮತ್ತು ಕರಿಮೆಣಸು ಉತ್ಪಾದನೆ ಹೆಚ್ಚಾಗುತ್ತಿದ್ದರೂ, ಬೆಳೆ ಗಾರರಿಗೆ ಸೂಕ್ತ ಬೆಲೆ ಸಿಗದಿರುವದು, ತೋಟಗಳ ನಿರ್ವಹಣಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿ ರುವದು, ಗೊಬ್ಬರ ಮತ್ತು ಕ್ರಿಮಿ ನಾಶಕಗಳ ಬೆಲೆ ದುಬಾರಿಯಾಗಿ ರುವದು, ಕಾರ್ಮಿಕರ ವೇತನ ಹೆಚ್ಚಳವಾಗಿರುವದು, ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ರೈತರು ತೊಂದರೆ ಅನುಭವಿಸುತ್ತಿರುವದು, ವನ್ಯಜೀವಿಗಳ ದಾಳಿಯಿಂದ ಬೆಳೆಗಾರರು ಹಾಗೂ ರೈತರಿಗೆ ಆಗುತ್ತಿರುವ ಕಷ್ಟ, ನಷ್ಟ, ಸರ್ಕಾರದ ನಿಯಮಗಳಿಂದ ಎದುರಾಗುತ್ತಿರುವ ತೊಡಕುಗಳು, ವಿಯಟ್ನಾಂನಿಂದ ಕರಿಮೆಣಸು ಆಮ ದಾಗುತ್ತಿರುವ ಕುರಿತು ಚರ್ಚಿಸಲಾ ಗುವದೆಂದು ಸುಜೈ ಬೋಪಯ್ಯ ತಿಳಿಸಿದರು.

ಜಲ ಜಾಗೃತಿ

ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿರು ವದರಿಂದ ಬೆಳೆಗಾರರ ಹಿತದೊಂದಿಗೆ ಜಲ ಜಾಗೃತಿಯ ಕಾರ್ಯಕ್ರಮ ಕೂಡ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು, ಮಳೆ ನೀರು ಕೊಯ್ಲಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾ. 24 ರಂದು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಂದು ಬೆಳಿಗ್ಗೆ 10.30 ಗಂಟೆಗೆ ಕಿತ್ತಳೆ ಬೆಳೆಗಾರರ ಸಂಘದ ಸಭಾಂಗಣದಲ್ಲಿ ‘ಜನಶಕ್ತಿಯಿಂದ ನದಿಗಳ ಮರು ಜೀವ’ ವಿಷಯ ಕುರಿತು ಕಾರ್ಯಾಗಾರ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಅಜ್ಜಮಾಡ ಚೆಂಗಪ್ಪ, ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಸಂಚಾಲಕ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆ ಸಂಚಾಲಕ ಆಲೆಮಾಡ ಮಂಜುನಾಥ್ ಹಾಗೂ ಟಿ. ಶೆಟ್ಟಿಗೇರಿ ಸಂಚಾಲಕ ಚೆಟ್ಟಂಗಡ ಕಾರ್ಯಪ್ಪ ಉಪಸ್ಥಿತರಿದ್ದರು.