ಕುಶಾಲನಗರ, ಜೂ. 21: ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಭೇಟಿ ನೀಡಿ ಆಸ್ಪತ್ರೆಯ ಸಮಸ್ಯೆಗಳ ಕುರಿತು ವೈದ್ಯ ಸಿಬ್ಬಂದಿಗಳ ಜೊತೆ ಚರ್ಚಿಸಿದರು.
ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದುದನ್ನು ಗಮನಿಸಿದ ಡಿಎಚ್‍ಒ ಖಾಲಿ ಇದ್ದ ಮಕ್ಕಳ ತಜ್ಞರ ಹುದ್ದೆ ತಕ್ಷಣ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದಾರೆ. ಅರವಳಿಕೆ ಹಾಗೂ ಶಸ್ತ್ರ ಚಿಕಿತ್ಸಕ ವೈದ್ಯರ ನೇಮಕ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವದು ಎಂದಿದ್ದಾರೆ. ಗ್ರಾಮೀಣ ಪ್ರದೇಶಗಳಾದ ಸೂರ್ಲಬ್ಬಿ, ಶಿರಂಗಾಲ, ಮಾಲ್ದಾರೆ, ಬಿರುನಾಣಿ, ಬಾಳೆಲೆ ಹಾಗೂ ಚೇರಂಬಾಣೆ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯ ಸಿಬ್ಬಂದಿಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವದು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.